ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅ.2ರಿಂದ ವೆಸ್ಟ್ ಇಂಡೀಸ್‌ಎ, ಭಾರತ ಎ ಪಂದ್ಯ

Lingaraj Badiger
Updated On : 7 Sept 2013, 10:38 am

ಕ.ಪ್ರ.ವಾರ್ತೆ, ಶಿವಮೊಗ್ಗ, ಸೆ.6
ರಾಜ್ಯದಲ್ಲಿಯೇ ಅತಿ ಹೆಚ್ಚು ಟರ್ಫ್ ಅಂಕಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯ ಕ್ರೀಡಾ ಇತಿಹಾಸದಲ್ಲೀಗ ಮತ್ತೊಂದು ಸಾಧನೆಯ ಪುಟ ಸೇರಿದೆ. ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಎ ಹಾಗೂ ಭಾರತ ಎ ತಂಡಗಳ ನಡುವೆ ನಾಲ್ಕು ದಿನದ ಪಂದ್ಯವು ನಗರದ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಅಕ್ಟೋಬರ್ 2ರಿಂದ 5ರ ವರೆಗೆ ನಡೆಯಲಿದೆ.
ಇದೂವರೆಗೆ ಜಿಲ್ಲೆಯಲ್ಲಿ 6 ರಣಜಿ ಪಂದ್ಯಗಳು, ಬಿ.ಎಸ್. ಚಂದ್ರಶೇಖರ್ ಸಹಾಯಾರ್ಥ ಒಂದು ಪಂದ್ಯ ಹಾಗೂ ದಕ್ಷಿಣ ವಲಯ ಅಂತರ ರಾಜ್ಯ ಟಿ20 ಪಂದ್ಯಾವಳಿ ಯಶಸ್ವಿಯಾಗಿ ನಡೆದಿವೆ. ಈಗ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಭೂಪಟದಲ್ಲಿ ಶಿವಮೊಗ್ಗವೂ ಸೇರ್ಪಡೆಯಾಗಲಿದೆ.
ನಗರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಲಯ ಸಂಚಾಲಕ ಡಿ.ಆರ್. ನಾಗರಾಜ್, ಕೆಎಸ್‌ಸಿಎ ಆರ್‌ಸಿ ಅಕಾಡೆಮಿ ಅಧ್ಯಕ್ಷ ಡಿ.ಎಸ್. ಅರುಣ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ವೆಸ್ಟ್ ಇಂಡೀಸ್ ಎ ತಂಡವು ಸೆ.12ರಂದು ಭಾರತಕ್ಕೆ ಆಗಮಿಸಲಿದ್ದು, ಸೆ.15, 17 ಹಾಗೂ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಏಕೈಕ ಟಿ20 ಪಂದ್ಯವು ಇದೇ ಕ್ರೀಡಾಂಗಣದಲ್ಲಿ ಸೆ.21ರಂದು ನಡೆಯುವುದು.
ನಾಲ್ಕು ದಿನಗಳ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳೂ ಸಹ ಈ ಪ್ರವಾಸದಲ್ಲಿ ಆಯೋಜನೆಯಾಗಿದ್ದು, ಮೊದಲ ಪಂದ್ಯವು ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಸೆ.25ರಿಂದ 28ರ ವರೆಗೆ, ದ್ವಿತೀಯ ಪಂದ್ಯವು ಶಿವಮೊಗ್ಗದ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಅ.2ರಿಂದ 5ರ ವರೆಗೆ, ತೃತೀಯ ಪಂದ್ಯವು ಹುಬ್ಬಳ್ಳಿಯಲ್ಲಿ ಅ.9ರಿಂದ 12ರ ವರೆಗೆ ನಡೆಯುವುದು. ವೆಸ್ಟ್ ಇಂಡೀಸ್ ತಂಡದಲ್ಲಿ 7 ಮಂದಿ ರಾಷ್ಟ್ರೀಯ ತಂಡದ ಆಟಗಾರರು ಪಾಲ್ಗೊಳ್ಳುವರು. ಭಾರತ ತಂಡದಲ್ಲಿಯೂ ಸಹ ಪ್ರಮುಖ ಆಟಗಾರರು ಇರಲಿದ್ದಾರೆ.
ಉತ್ತಮ ಮೈದಾನ: ನಗರದ ಜೆಎನ್‌ಎನ್‌ಸಿಇ ಕಾಲೇಜು ಮೈದಾನದ ಕ್ರೀಡಾಂಗಣದ ವಿಕೆಟ್ ಹಾಗೂ ಔಟ್‌ಫೀಲ್ಡ್ ಉತ್ತಮ ಗುಣಮಟ್ಟದ್ದಾಗಿದೆ ಎಂದು ಕ್ಯುರೇಟರ್ ನಾರಾಯಣರಾಜು ಹೇಳಿದರು. ಕೆಎಸ್‌ಸಿಎ ಸಂಸ್ಥೆಯ ಸತೀಶ್ ವಿಶ್ವನಾಥ್, ಶಿವಮೊಗ್ಗ ಪಂದ್ಯಕ್ಕೆ ಸೂಕ್ತ ಬಂದೋಬಸ್ತ್ ನಿಯೋಜಿಸುವಂತೆ ಕೋರಲಾಗಿದೆ ಎಂದರು.ಜೆಎನ್‌ಎನ್‌ಸಿಇ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸದಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement