ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಈಶ್ವರಪ್ಪ ವಿರುದ್ಧ ಹೋರಾಟ ಕೈಬಿಟ್ಟಿಲ್ಲ

Lingaraj Badiger
Updated On : 7 Sept 2013, 10:38 am

ಶಿವಮೊಗ್ಗ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ ಎದುರಿಸುತ್ತಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧದ ಪ್ರಕರಣ ಹಿಂತೆಗೆದುಕೊಂಡಿರುವುದು ತಾತ್ಕಾಲಿಕ ಮಾತ್ರ. ತಾಂತ್ರಿಕ ಕಾರಣದಿಂದ ಈ ಪ್ರಕ್ರಿಯೆ ನಡೆದಿದೆಯೇ ಹೊರತು ಇದರ ಅರ್ಥ ಈಶ್ವರಪ್ಪ ಅವರು ನಿರಪರಾಧಿ, ದೋಷಮುಕ್ತ ಎಂದಲ್ಲ ಎಂದು ವಕೀಲ ಬಿ. ವಿನೋದ್ ಹೇಳಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಬಗ್ಗೆ ಇವರು ನಗರದ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ರದ್ದು ಮಾಡುವಂತೆ ಕೋರಿ ಈಶ್ವರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಕಾನೂನಾತ್ಮಕ ಪ್ರಕ್ರಿಯೆ ಹಿನ್ನಲೆಯಲ್ಲಿ ಬಿ. ವಿನೋದ್ ಅವರು ಪ್ರಕರಣ ಹಿಂಪಡೆದಿದ್ದರು. ಈ ಸಂಬಂಧ ವಿವರಣೆ ನೀಡಲು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಕರೆದಿದ್ದರು.
ರಾಜ್ಯಪಾಲರ ಅನುಮೋದನೆ: ಕೆ.ಎಸ್. ಈಶ್ವರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಈ ಮೊಕದ್ದಮೆ ದಾಖಲಿಸಿದ್ದ ಅವರು, ಜನಪ್ರತಿನಿಧಿಯಾಗಿದ್ದ ಕಾರಣ ಮೊಕದ್ದಮೆ ದಾಖಲಿಸಲು ರಾಜ್ಯಪಾಲರ ಅನುಮೋದನೆ ಬೇಕಿತ್ತು. ಮೂರು ತಿಂಗಳಲ್ಲಿ ಅನುಮೋದನೆ ಸಿಗದಿದ್ದರೆ ಮೊಕದ್ದಮೆ ದಾಖಲಿಸುವ ಅವಕಾಶ ಕಾನೂನಿನಲ್ಲಿಯೇ ಇದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರ ಅನುಮತಿ ಕೋರಿ ಮೂರು ತಿಂಗಳಾಗುವ ಮುನ್ನವೇ ಮೊಕದ್ದಮೆ ದಾಖಲಿಸಿ ನಂತರ ದಾಖಲೆಗಳನ್ನು ಒದಗಿಸಲು ನಿರ್ಧರಿಸಲಾಗಿತ್ತು ಎಂದು ವಿನೋದ್ ವಿವರ ನೀಡಿದರು.
ಈ ನಡುವೆ ಹೈಕೋರ್ಟ್ ಪೀಠ ಮತ್ತೊಂದು ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಮೊಕದ್ದಮೆ ದಾಖಲಿಸಿದ ಸಂದರ್ಭದಲ್ಲಿ ರಾಜ್ಯಪಾಲರ ಅನುಮೋದನೆ ಸಲ್ಲಿಸುವುದು ಕಡ್ಡಾಯವಾಗಿದೆ.
ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ವಿರುದ್ಧ ಸಲ್ಲಿಸಿದ್ದ ದೂರಿನ ವಿಚಾರಣೆ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿ, ಮತ್ತೊಂದು ಕಾನೂನಾತ್ಮಕವಾಗಿ ಮರುದೂರು ಸಲ್ಲಿಸಲು ಅವಕಾಶವನ್ನು ಕೇಳಿದ್ದೆನು. ಅದಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿದ್ದರಿಂದ ಪ್ರಕರಣ ಹಿಂಪಡೆಯಲಾಗಿದೆ ಎಂದು ವಿನೋದ್ ಹೇಳಿದರು.
ಸುಪ್ರೀಂಗೆ: ಮತ್ತೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲೇಬೇಕಾಗಿದ್ದು, ತಪ್ಪಿಸಿಕೊಳ್ಳಲು ಬರುವುದಿಲ್ಲ. ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿಯೇ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ವಿನೋದ್ ಹೇಳಿದರು.
ಸಾಧಕಬಾಧಕಗಳನ್ನು ಪರಿಶೀಲಿಸಿ ಮುಂದುವರಿಯುತ್ತೇನೆ. ಜಿಲ್ಲಾ ನ್ಯಾಯಾಲಯದಲ್ಲಿ ಮರು ಪ್ರಕರಣ ದಾಖಲಿಸುವ ಅವಕಾಶವಂತೂ ಇದ್ದೇ ಇದೆ. ಈಶ್ವರಪ್ಪ ಅವರ ವಿರುದ್ಧದ ಪ್ರಕರಣ ಕೈಬಿಡುವ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರ ನಿರ್ಲಕ್ಷ್ಯ: ದೂರು ದಾಖಲಿಸಿ 8 ತಿಂಗಳಾದರೂ ತನಿಖೆ ಸಂಪೂರ್ಣವಾಗಿಲ್ಲ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಲೋಕಾಯುಕ್ತ ಪರ ಹಾಜರಾಗಬೇಕಿದ್ದ ಸರ್ಕಾರಿ ಅಭಿಯೋಜಕ ಬೆಳ್ಳಿಯಪ್ಪ ಅವರು ಪದೇಪದೇ ಗೈರುಹಾಜರಾಗುತ್ತಿದ್ದರು. ಈ ಕಾರಣದಿಂದ ವಿಚಾರಣೆ ಕುಂಠಿತವಾಯಿತು ಎಂದು ವಿನೋದ್ ಪರ ವಕೀಲ ಕೆ.ಪಿ. ಶ್ರೀಪಾಲ್ ಹೇಳಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಅವರ ಸರ್ಕಾರವೂ ಲೋಕಾಯುಕ್ತರಿಗೆ ಸೂಕ್ತ ಸೌಲಭ್ಯ ಕೊಟ್ಟಿಲ್ಲ. ಇದರಿಂದಾಗಿ ಪ್ರಕರಣಗಳ ವಿಚಾರಣೆ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದರು. ಗೋಷ್ಠಿಯಲ್ಲಿ ವಕೀಲ ಜಿ.ಎಸ್. ಸೋಮಶೇಖರ್ ಇದ್ದರು.

ವಿದೇಶದಲ್ಲಿ ಈಶ್ವರಪ್ಪ ಆಸ್ತಿ
ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಆಸ್ತಿ ವಿದೇಶದಲ್ಲಿಯೂ ಇರುವುದು ಲೋಕಾಯುಕ್ತ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ವಕೀಲ ಕೆ.ಪಿ. ಶ್ರೀಪಾಲ್ ಹೇಳಿದರು.
ಅಬುದಾಬಿಯಲ್ಲಿರುವ ವಾಂಟೇಜ್ ರಿಯಲ್ ಎಸ್ಟೇಟ್ ಅಂಡ್ ಮ್ಯಾನೇಜ್‌ಮೆಂಟ್ ಎಂಬ ಸಂಸ್ಥೆಯಲ್ಲಿ ಈಶ್ವರಪ್ಪ ಹಾಗೂ ಅವರ ಕುಟುಂಬದವರು ಬಂಡವಾಳ ತೊಡಗಿಸಿದ್ದಾರೆ. ಅಲ್ಲದೇ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಗಣಿ ಇರುವ ಮಾಹಿತಿಯೂ ಲೋಕಾಯುಕ್ತರ ಬಳಿ ಇದೆ. ಆದರೆ ಈವರೆಗೆ ಶೇ.30ರಷ್ಟು ಮಾತ್ರ ತನಿಖೆಯಾಗಿದೆ. ಸಂಪೂರ್ಣ ತನಿಖೆ ನಡೆಸುವುದಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement