ಕೆರೆ ಪರಿಸರಕ್ಕೆ ಹಾನಿಯಾಗದಂತೆ ಗಣೇಶ ವಿಸರ್ಜನೆ
ಕ.ಪ್ರ.ವಾರ್ತೆ, ಶಿಕಾರಿಪುರ, ಸೆ.6
ಈ ಬಾರಿಯ ಗಣಪತಿ ಉತ್ಸವವನ್ನು ಶ್ರದ್ದಾ ಭಕ್ತಿಯ ಜತೆಗೆ ಕೋಟ್ಯಂತರ ವೆಚ್ಚದಲ್ಲಿ ಪುನರ್ ನಿರ್ಮಿಸಿರುವ ಶ್ರೀ ಹುಚ್ಚೂರಾಯನ ಕೆರೆ ಹಾಗೂ ಸುತ್ತಲಿನ ಸುಂದರ ಪರಿಸರಕ್ಕೆ ಧಕ್ಕೆಯಾಗದಂತೆ ನಿರ್ವಹಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಭಕ್ತರದ್ದಾಗಿದೆ ಎಂದು ಇಲ್ಲಿನ ಪೋಲಿಸ್ ಉಪಾಧೀಕ್ಷಕ ಬಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಗಣಪತಿ ಹಬ್ಬದ ಅಂಗವಾಗಿ ಪೋಲಿಸ್ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ನಡೆದ ಸರ್ವಧರ್ಮ ಮುಖಂಡರ ಶಾಂತಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕಾರಿಪುರದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಪೋಲಿಸ್ ಇಲಾಖೆಯದ್ದಾಗಿದ್ದು ಈ ದಿಸೆಯಲ್ಲಿ ಗಣಪತಿ ಉತ್ಸವ ಸಮಿತಿಗಳು ಕಡ್ಡಾಯವಾಗಿ ಇಲಾಖೆಯ ಜತೆಗೆ ಸಂಬಂದಿಸಿದ ಪುರಸಭೆ, ಮೆಸ್ಕಾಂ ಮತ್ತಿತರ ಇಲಾಖೆಯ ಪರವಾನಿಗೆಯನ್ನು ಪಡೆಯುವುದು ಅಗತ್ಯವಾಗಿದೆ ಎಂದ ಅವರು ಉದ್ದೇಶಪೂರ್ವಕವಾಗಿ ಶಾಂತಿ ನೆಮ್ಮದಿಗೆ ಭಂಗ ತರುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮಕ್ಕೆ ಇಲಾಖೆ ಸಿದ್ದವಾಗಿದೆ ಎಂದರು.
ಪರಿಸರ ರಕ್ಷಿಸಿ: ಮಾಜಿ ಪುರಸಭಾಧ್ಯಕ್ಷ ಹಾಲಿ ಸದಸ್ಯ ಟಿ.ಎಸ್.ಮೋಹನ್ ಮಾತನಾಡಿ,ಪಟ್ಟಣದಲ್ಲಿನ ವಿಪರೀತ ಗಣಪತಿಯ ವಿಸರ್ಜನೆಯಿಂದಾಗಿ ಕೋಟ್ಯಂತರ ವೆಚ್ಚದಲ್ಲಿ ಪುನರ್ ನಿರ್ಮಿಸಿರುವ ಶ್ರೀ ಹುಚ್ಚೂರಾಯನ ಕೆರೆ ಮಲಿನವಾಗದಂತೆ ಈ ಬಾರಿ ಕೆರೆ ಸಮೀಪದಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ತಾತ್ಕಾಲಿಕ ನೀರಿನ ಟ್ಯಾಂಕನ್ನು ಪುರಸಭೆ ನಿರ್ಮಿಸಲಿದ್ದು ನಾಗರೀಕರ ಸಹಿತ ವಿವಿಧ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗುವ ಎಲ್ಲಾ ಗಣೇಶ ಮೂರ್ತಿಗಳನ್ನು ಈ ಟ್ಯಾಂಕ್‌ನಲ್ಲಿಯೇ ವಿಸರ್ಜಿಸುವ ಮೂಲಕ ಕೆರೆಯ ಸಹಿತ ಸಮೀಪದ ಸುಂದರ ಪರಿಸರಕ್ಕೆ ಧಕ್ಕೆಯಾಗದಂತೆ ಸಹಕರಿಸಬೇಕಾಗಿದೆ ಎಂದರು.
ತಾಲೂಕು ಕೆಜೆಪಿ ಸಂಘಟನಾ ಕಾರ್ಯದರ್ಶಿ ಹಾಗೂ ಶಾಸಕ ಯಡಿಯೂರಪ್ಪನವರ ಆಪ್ತ ಗುರುಮೂರ್ತಿ ಮಾತನಾಡಿ, ಶಾಂತಿ, ಸುವ್ಯವಸ್ಥೆಗೆ ಶಿಕಾರಿಪುರ ಮಾದರಿಯಾಗಿದ್ದು ಗಣೇಶ ಉತ್ಸವ ಕೇವಲ ಹಿಂದೂಗಳ ಹಬ್ಬವಾಗದೆ ಎಲ್ಲಾ ವರ್ಗದ ಜನತೆ ಪಾಲ್ಗೊಳ್ಳುವ ಮೂಲಕ ಬಹು ದೊಡ್ಡ ಹಬ್ಬವಾಗಿದೆ ಎಂದ ಅವರು ಪ್ರತಿ ವರ್ಷದ ರೀತಿಯಲ್ಲಿಯೇ ಶಾಂತಯುತವಾಗಿ ಆಚರಿಸಿ ಇಲಾಖೆಗೆ ಎಲ್ಲಾ ರೀತಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲಾರ್ ಪ್ರಕಾಶ್ ಗಣಾಚಾರಿ, ಪೋಲಿಸ್ ವೃತ್ತ ನಿರೀಕ್ಷಕ ಮಾದಪ್ಪ, ಪುರಸಭಾ ಸದಸ್ಯ ವಸಂತಗೌಡ, ಪರಶುರಾಮ್ ಚುರಗಲ್ಲಿ, ಪಿಎಸ್ಸೈ ಕಿರಣಕುಮಾರ್, ತಿಪ್ಪೇಸ್ವಾಮಿ, ಮೋಹನ್ ಕುಮಾರ್,ಮೇಘರಾಜ್, ಪುರಸಭಾ ಆರೋಗ್ಯ ನಿರೀಕ್ಷಕ ಹಿರೇಮಠ್, ಮತ್ತಿತರರು ಉಪಸ್ಥಿತರಿದ್ದರು.