ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರ ಬಂಧನ
ಕ.ಪ್ರ.ವಾರ್ತೆ, ಸಾಗರ, ಸೆ.6
ಪಟ್ಟಣದ ಪುಟ್ಟಪ್ಪ ಬೇತೂರು ಆಸ್ಪತ್ರೆ ಹಿಂಭಾಗದ ರಸ್ತೆಯ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಕೆ.ಬಿ. ಕಲಘಟಗಿ ಎಂಬುವವರ ಮನೆಯ ಹಿತ್ತಲಿನಲ್ಲಿದ್ದ ಎಳೆಯ ಗಂಧದ ಮರವನ್ನು ಕಡಿದು ಸಾಗಿಸುತ್ತಿದ್ದ ಇಬ್ಬರನ್ನು ಪೇಟೆಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಣಪತಿ ಹಬ್ಬದ ಅಂಗವಾಗಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಜಟ್ಯಪ್ಪ, ಅಶೋಕ ಹಾಗೂ ದಿವಾಕರ ನಾಯ್ಕ ಎಂಬುವವರು ಇಬ್ಬರು ವ್ಯಕ್ತಿಗಳು ಮರದ ತುಂಡುಗಳನ್ನು ಹೊತ್ತುಹೋಗುತ್ತಿರುವುದನ್ನು ಗಮನಿಸಿ ಅನುಮಾನದಿಂದ ತಪಾಸಣೆಗೆ ಒಳಪಡಿಸಿದಾಗ ಅದು ಶ್ರೀಗಂಧದ ಮರ ಎನ್ನುವುದು ಪತ್ತೆಯಾಗಿದೆ.
ಎಸ್.ಎನ್. ನಗರ ವಾಸಿ ಬದ್ರುದ್ದೀನ್ ಹಾಗೂ ರಾಮನಗರ ನಿವಾಸಿ ಮಹ್ಮದಾಲಿ ಬಂಧಿತ ಆರೋಪಿಗಳಾಗಿದ್ದಾರೆ. ಇವರ ಮೇಲೆ ಹಿಂದೆ ಸಹ ಶ್ರೀಗಂಧ ಕಳ್ಳತನಕ್ಕೆ ಸಂಬಂಧಪಟ್ಟಂತೆ ಪ್ರಕರಣಗಳಿವೆ. ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ಯಾಕ್ಟರಿಯಲ್ಲಿ ಕಳವು
ಭದ್ರಾವತಿ: ಸಮೀಪದ ಮಾಚೇನಹಳ್ಳಿಯ ವಿಜಯಲಕ್ಷ್ಮಿ ವ್ಯಾಲ್ಯೂಬಲ್ಸ್ ಫ್ಯಾಕ್ಟರಿ ಕಚೇರಿ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು 23,000 ರು.ಗಳ ಮೌಲ್ಯದ ತಾಮ್ರದ ತಂತಿಯನ್ನು ಕಳವು ಮಾಡಿದ್ದಾರೆಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಶ್ರೀನಿವಾಸ ನ್ಯೂಟೌನ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಂಗಡಿ ದರೋಡೆ
ಭದ್ರಾವತಿ ತಾಲೂಕು ತಿಮ್ಲಾಪುರ ಗ್ರಾಮದ ಬಳಿ ಇರುವ ಕೊರಚರಹಟ್ಟಿಯಲ್ಲಿರುವ ತನ್ನ ಅಂಗಡಿ ಬೀಗ ಮುರಿದು ಅಂಗಡಿಯಲ್ಲಿದ್ದ 12,000 ರು.ಗಳು ನಗದು ಹಾಗೂ ಒಂದು ಮೊಬೈಲ್ ಫೋನನ್ನು ದರೋಡೆ ಮಾಡಿದ್ದಾರೆಂದು ಲಕ್ಷ್ಮಿದೇವಿ ಎಂಬವರು ಹೊಳೆಹೊನ್ನೂರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೈಕ್ ಕಳವು
ಭದ್ರಾವತಿಯ ಹೊಸಮನೆ ವಾಸಿ ಶಂಕರನಾಥ ಎಂಬವರು ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳವು ಮಾಡಲಾಗಿದೆ ಎಂದು ಹೊಸಮನೆ ಶಿವಾಜಿವೃತ್ತದ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬೈಕಿನ ಬೆಲೆ ಸುಮಾರು 30 ಸಾವಿರ ಅಂದಾಜಿಸಲಾಗಿದೆ.
25 ಸಾವಿರ ವಂಚನೆ
ಒಂದಕ್ಕೆ ನಾಲ್ಕು ಪಟ್ಟು ಹಣ ಕೊಡುವುದಾಗಿ ನಂಬಿಸಿ 25,000 ರು.ಗಳನ್ನು ವಂಚಿಸಿದ ಪ್ರಕರಣ ಹಳೇನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಸಂತೇ ಮೈದಾನದ ವಾಸಿ ಜಗದೀಶ ಎಂಬವರಿಗೆ ಬೀರೂರು ತಾಲೂಕಿನ ಮೂರ್ತಿ ಹಾಗೂ ಉಮೇಶ ಎಂಬವರು ಈ ರೀತಿ ಮೋಸ ಮಾಡಿ ಹಣವನ್ನು ದೋಚಿದ್ದಾರೆ. ಹಳೇನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.