ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲಾ ಆಸ್ಪತ್ರೆ ಶಿವಮೊಗ್ಗಕ್ಕೆ ವಾಪಸ್ ತನ್ನಿ

Vishwanath S
Updated On : 8 Sept 2013, 12:11 pm

ಕ.ಪ್ರ.ವಾರ್ತೆ  ಶಿವಮೊಗ್ಗ  ಸೆ.7
 ಜಿಲ್ಲಾ ಆಸ್ಪತ್ರೆಯನ್ನು ಶಿವಮೊಗ್ಗಕ್ಕೆ ವಾಪಸ್ ತರಬೇಕು. ಮೆಗ್ಗಾನ್ ಬೋಧನಾ ಆಸ್ಪತ್ರೆಯ ನಿರ್ದೇಶಕ ಡಾ. ಗಂಗಾಧರ್ ಅವರನ್ನು ಅಮಾನತು ಮಾಡಿ, ಹಗರಣ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಸದಸ್ಯರು ಶನಿವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮೆಗ್ಗಾನ್ ಆಸ್ಪತ್ರೆಯಿಂದ ಅಮೀರ್ ಅಹಮದ್ ಸರ್ಕಲ್ ಮೂಲಕ ಸರ್ಕಾರಿ ಬಸ್ ನಿಲ್ದಾಣದವರೆಗೆ ಸಿಮ್ಸ್ ನಿರ್ದೇಶಕ ಡಾ. ಗಂಗಾಧರ್ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಅಣುಕು ಶವಯಾತ್ರೆ ನಡೆಸಿ, ಬಸ್ ನಿಲ್ದಾಣದ ಬಳಿ ಪ್ರತಿಕೃತಿ ದಹಿಸಿದರು.
ಅವ್ಯವಹಾರ: ಆಸ್ಪತ್ರೆ ಔಷಧಿ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಖರೀದಿಸುವುದರಲ್ಲಿ ಡಾ. ಗಂಗಾಧರ್ ಲೋಪವೆಸಗಿದ್ದಾರೆ. ನಾನ್ ಕ್ಲಿನಿಕಲ್ ಸಿಬ್ಬಂದಿಗಳನ್ನು ಮ್ಯಾನ್ ಏಜೆನ್ಸಿಯವರಿಂದ ಗುತ್ತಿಗೆ ಕಾರ್ಮಿಕರನ್ನು ಪಡೆಯುವಲ್ಲಿ ನಿಯಮ ಉಲ್ಲಂಘಿಸಿ, ಅವರಿಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
32 ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ಅವ್ಯವಹಾರ ಮಾಡಿ ನಿಯಮ ಉಲ್ಲಂಘಿಸಿದ್ದಾರೆ. ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಯಂತ್ರ ಅಗತ್ಯವಿದ್ದರೂ ಗಂಗಾಧರ್ ಈ ಬಗ್ಗೆ ಗಮನ ಹರಿಸಿದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಸರ್ಕಾರ ಗಂಗಾಧರ್ ಅವರನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ: ಮೆಗ್ಗಾನ್ ಆಸ್ಪತ್ರೆ ಕೆಲವು ವೈದ್ಯರು ನಿರ್ದೇಶಕ ಗಂಗಾಧರ್ ಬೆಂಬಲ ಪಡೆದು ಕರ್ತವ್ಯದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸದೇ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿ ಹಣ ಗಳಿಸಿದ್ದಾರೆ.
 ಗಂಗಾಧರ್ ಅವರಿಗೆ ಬೇಕಾದ ವೈದ್ಯರಿಗೆ ಅಕ್ರಮವಾಗಿ ನಿಯಮ ಉಲ್ಲಂಘಿಸಿ, ಬಡ್ತಿ ನೀಡಿ ಅವರಿಂದ ಲಾಭ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ತಮ್ಮ ಕೆಳವರ್ಗದ ಸಿಬ್ಬಂದಿ ಮೇಲೆ ನಿರಂತರ ದೌರ್ಜನ್ಯ ಮಾಡಿ, ಕೆಳ ವರ್ಗದ ಸಿಬ್ಬಂದಿ ಭಯದ ವಾತಾರಣದಲ್ಲಿ ಕೆಲಸ ಮಾಡುತ್ತಿದ್ದು, ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಔಷಧೋಪಚಾರಗಳು ಸಿಗುತ್ತಿಲ್ಲ.
ಇದನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಇಲ್ಲದ ಆರೋಪಗಳನ್ನು ಹೊರಿಸಿ, ಸುಳ್ಳು ದೂರು ದಾಖಲಿಸಿ ಬೆದರಿಸಿದ ಪ್ರಸಂಗಳು ನಡೆದಿವೆ ಎಂದು ಪ್ರತಿಭಟನಕಾರರು ಆಪಾದಿಸಿದರು.
ಈ ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಗ್ಯ ಸಚಿವರು ಆಸ್ಪತ್ರೆಯ ಅಧೀಕ್ಷಕರೊಂದಿಗೆ ಚರ್ಚಿಸಿ, ಗಂಗಾಧರ್ ಅವರನ್ನು ಅಮಾನತು ಮಾಡಿ, ಅವರ ವಿರುದ್ಧ ಲೋಕಾಯುಕ್ತ ತನಿಖೆ ಒಳಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ವಿ. ಭಗವಾನ್, ಉಪಾಧ್ಯಕ್ಷ ಬೊಮ್ಮನಕಟ್ಟೆ ಕುಮಾರ್, ಯಶವಂತ್, ಪ್ರಧಾನ ಕಾರ್ಯದರ್ಶಿ ಜುಬೇರ್ ಅಹಮದ್, ಮೊಹಮ್ಮದ್ ಇಮ್ತಿಯಾಜ್ ಖಾನ್, ನಗರಾಧ್ಯಕ್ಷ ರಾಜು, ಪುರಲೆ ಜಗದೀಶ್, ಮುಖಂಡ ಶಫಿ, ರಾಮಣ್ಣ,  ರಮೇಶ್, ಗೆಡ್ಡೆ ಸಿದ್ದಪ್ಪ, ಮಹಿಳಾ ಅಧ್ಯಕ್ಷೆ ಉಷಾದೇವಿ, ಚಂದ್ರಮ್ಮ, ಶಾಂತಮ್ಮ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement