ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೋಗ ವಸತಿ ಗೃಹ: ಪ್ರಾಧಿಕಾರದ ವ್ಯಾಪ್ತಿಗೆ

Vishwanath S
Updated On : 8 Sept 2013, 12:11 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಸೆ.7
ಇನ್ನು ಕೆಲವೇ ದಿನಗಳಲ್ಲಿ ಜೋಗ ನಿರ್ವಹಣೆ ಪ್ರಾಧಿಕಾರವು ಚಟುವಟಿಕೆ ನಡೆಸುವ ಗಡಿ ಗುರುತು ನಡೆಯಲಿದೆ. ನಂತರ ಈ ಗಡಿಯ ಒಳಭಾಗದಲ್ಲಿ ಬರುವ ಎಲ್ಲಾ ವಸತಿ ಗೃಹಗಳು, ಕಟ್ಟಡಗಳು ಈ ಪ್ರಾಧಿಕಾರದ
ವ್ಯಾಪ್ತಿಗೇ ಬರಲಿವೆ.
ಜೋಗ್ ಫಾಲ್ಸ್‌ನಲ್ಲಿ ಶನಿವಾರ ಸಂಜೆ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಉಪಸ್ಥಿತಿಯಲ್ಲಿ ನಡೆದ ಜೋಗ ನಿರ್ವಹಣೆ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ಈ ತೀರ್ಮಾನ ಕೈಗೊಳ್ಳಲಾಯಿತು.
ಡಿಸಿಗೆ ಸೂಚನೆ: ಹಾಲಿ ಜೋಗ ಜಲಪಾತದ ಸುತ್ತಮುತ್ತ ಹಲವು ಇಲಾಖೆಗಳಿಗೆ ಸೇರಿದ ವಸತಿ ಗೃಹಗಳು, ಕಟ್ಟಡಗಳು ಇವೆ. ಎಲ್ಲಾ ಇಲಾಖೆಗಳಿಗೂ ಸಹ ತಮ್ಮದೊಂದು ಕಟ್ಟಡ ಜೋಗದಲ್ಲಿರಲಿ ಎಂಬ ಆಸೆ. ಎಲ್ಲವೂ ಪ್ರತ್ಯೇಕ ನಿರ್ವಹಣೆಗೆ ಒಳಪಡುತ್ತಿದ್ದರಿಂದ ಸಮನ್ವಯ ಸಾಧ್ಯವಾಗುತ್ತಿರಲಿಲ್ಲ. ಈ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ವಿದ್ಯುತ್ ನಿಗಮ ಸೇರಿದಂತೆ ಹಲವು ಇಲಾಖೆಗಳಿಗೆ ಸೇರಿದ ಕಟ್ಟಡಗಳಿವೆ. ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ತೀರ್ಮಾನದಿಂದ ಈ ರೀತಿಯ ಸಮಸ್ಯೆ ಬಗೆಹರಿಯಲಿದೆ. ಇದಕ್ಕೆ ಸಭೆಯು ತಾತ್ವಿಕ ಒಪ್ಪಿಗೆ ನೀಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಕಟ್ಟಡಗಳ ಹಸ್ತಾಂತರಕ್ಕೆ ಒಪ್ಪಿಗೆ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ಗಡಿ ಗುರುತಿಸುವ ಕಾರ್ಯವನ್ನು ಶೀಘ್ರ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಯವರಿಗೆ ಸಚಿವರು ಸೂಚಿಸಿದರು.
 ಕಳೆದ 6 ವರ್ಷದಿಂದ ಬಳಕೆಯಾಗದೇ ಉಳಿದ ಜಲಪಾತದ ಬಳಿಯಲ್ಲಿಯೇ ಇರುವ ಯಾತ್ರಿ ನಿವಾಸವನ್ನು ಸಹ ಪ್ರಾಧಿಕಾರದ ವಶಕ್ಕೆ ಪಡೆಯಲು ನಿರ್ಧರಿಸಲಾಯಿತು.
ಜೋಗ ಜಲಪಾತದ ಎದುರಿನಲ್ಲಿಯೇ ಇರುವ ಕೆಪಿಸಿಗೆ ಸೇರಿದ ವಸತಿ ಗೃಹವನ್ನು ತೆರವು ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸತಲಾಯಿತು.
ಪರ್ಯಾಯ ಭೂಮಿ: ಜಲಪಾತ ಬಳಿ ಸೋಮ ಎಂಟರ್‌ಪ್ರೈಸಸ್ ಸಂಸ್ಥೆಯು ನಿರ್ಮಿಸಲುದ್ದೇಶಿಸಿರುವ ತಾರಾ ಹೋಟೆಲ್ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿ ಇತ್ತು. 8 ಗುಂಟೆ ಜಾಗ ಅರಣ್ಯ ಇಲಾಖೆಗೆ ಸೇರಿದ್ದರಿಂದ ಕಾಮಗಾರಿ ನಡೆಸಲು ಬಿಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚೆ ನಡೆಸಿ, ಅರಣ್ಯ ಇಲಾಖೆಗೆ ಪರ್ಯಾಯವಾಗಿ ಬೇರೆ ಜಾಗ ನೀಡಲು ಸೂಚಿಸಲಾಯಿತು.  
 ಸೆ.15ರೊಳಗೆ ಸಂಬಂಧಪಟ್ಟ ಕಡತವನ್ನು ರವಾನಿಸುವುದಾಗಿ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್ ಅವರು ಸಭೆಗೆ ತಿಳಿಸಿದರು. ನವೆಂಬರ್ 15ರೊಳಗೆ ಸಂಪೂರ್ಣ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಲು ಸಚಿವ ದೇಶಪಾಂಡೆ ಸೂಚಿಸಿದರು.
ಸರ್ವಋತು ಜಲಪಾತ: ಸದ್ಯ ಮಳೆಗಾಲದಲ್ಲಿ ಮಾತ್ರ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಬರುತ್ತಾರೆ. ವರ್ಷದ 12 ತಿಂಗಳೂ ಸಹ ಪ್ರವಾಸಿಗರು ಬರುವಂತೆ ಮಾಡುವ ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಏಜೆನ್ಸಿಯೊಂದು ಜಲಪಾತದ ನೀರನ್ನು ರೀ ಸರ್ಕ್ಯೂಲೇಷನ್ ಮಾಡಿ ಸರ್ವಋತು ಜಲಪಾತವವನ್ನಾಗಿ ಮಾಡುವ ಸಲಹೆ ನೀಡಿದರು. ಈ ಯೋಜನೆಯ ಬಗ್ಗೆ ಕೆಪಿಸಿ ಅಧಿಕಾರಿಗಳೊಂದಿಗೆ ಚರ್ಚೆನಡೆಸಿ ಅಂತಿಮಗೊಳಿಸಲು ಸಚಿವರು ಸೂಚಿಸಿದರು.
ಜೋಗ ಉತ್ಸವವನ್ನು ಮುಂದಿನ ವರ್ಷ ಮಳೆಗಾಲದಲ್ಲಿ ಆಯೋಜಿಸಲು ಸಚಿವ ದೇಶಪಾಂಡೆ ಸಲಹೆ ನೀಡಿದರು.
ರಕ್ಷಣೆ, ಗ್ರೀನ್ ಪೊಲೀಸ್: ಜಲಪಾತ ಸುತ್ತಮುತ್ತ ರಕ್ಷಣೆ ಹಾಗು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಹಸಿರು ಪೊಲೀಸ್ ಯೋಜನೆಯನ್ನು ಸಭೆಯ ಮುಂದಿಟ್ಟರು. ಸ್ಥಳೀಯರಿಗೆ ತರಬೇತಿ ನೀಡಿ ಅವರನ್ನು ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ, ರಕ್ಷಣೆಗಾಗಿ ಬಳಸಿಕೊಳ್ಳುವ ಬಗ್ಗೆ ಸಮಗ್ರ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಯವರಿಗೆ ಸಚಿವ ದೇಶಪಾಂಡೆ ಸೂಚಿಸಿದರು.
 ಜಲಪಾತದ ಮೇಲ್ಭಾಗದಲ್ಲಿ ರಕ್ಷಣೆಗಾಗಿ ತಡೆ ನಿರ್ಮಿಸುವ ಬಗ್ಗೆ ಚರ್ಚೆ ನಡೆದು, ಜೋಗದ ಸೌಂದರ್ಯಕ್ಕೆ ಅಡ್ಡಿಯಾಗದಂತೆ ತಡೆ ಗೋಡೆ ಅಥವಾ ರೈಲಿಂಗ್ ಅಳವಡಿಸಲು ಸೂಚಿಸಿದರು. ಪ್ರವಾಸೋದ್ಯಮ ಇಲಾಖೆಯ ಡಿಸೈನರ್‌ಗಳ ನೆರವು ಪಡೆಯಲು ಸಚಿವರು ಸೂಚಿಸಿದರು.
ಹೆಚ್ಚು ವಸತಿ: ಜೋಗಕ್ಕೆ ಬರುವ ಪ್ರವಾಸಿಗರಿಗೆ ವಸತಿಗೆ ಅವಕಾಶ ಕಡಿಮೆ ಇರುವುದನ್ನು ಗಮನಿಸಿದ ಸಚಿವರು ಜಂಗಲ್ ಲಾಡ್ಜ್, ಮಯೂರ ಹೋಟೆಲ್‌ಗಳಲ್ಲಿ ವಸತಿ ಅವಕಾಶ ಹೆಚ್ಚಿಸುವಂತೆ ಸೂಚಿಸಿದರು. ಜಂಗಲ್ ಲಾಡ್ಜ್‌ನಲ್ಲಿ ಮಧ್ಯಮ ವರ್ಗದವರೂ ಸಹ ಬಂದು ಉಳಿಯಲು ಅವಕಾಶವಾಗುವಂತೆ ಡಾರ್ಮೆಟ್ರಿಗಳನ್ನು ರೂಪಿಸಲು ಸಲಹೆ ನೀಡಿದರು. 32 ಎಕರೆ ಜಾಗದಲ್ಲಿ 16 ಕಾಟೇಜ್‌ಗಳನ್ನು ಹೊಂದಿದ ಜಂಗಲ್ ಲಾಡ್ಜ್ ರೂಪಿಸುವುದರಿಂದ ಎಲ್ಲರಿಗೂ ಅವಕಾಶವಾಗುವುದಿಲ್ಲ. ಹೆಚ್ಚು ಜನರಿಗೆ ಅವಕಾಶ ನೀಡಿ ಎಂದರು.
 ಜತೆಗೆ ಜಲಪಾತದ ಬಳಿಯಲ್ಲಿಯೇ ಇರುವ ಪ್ರವಾಸೋದ್ಯ ಇಲಾಖೆಯ ಮಯೂರ ಹೋಟೆಲ್‌ನಲ್ಲಿಯೂ ಸಹ ಹೆಚ್ಚು ಕೊಠಡಿಗಳನ್ನು ನಿರ್ಮಿಸುವಂತೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅರವಿಂದ ಜಾದನ್, ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇವನ್ ಕೊಂಗ್ಲ ಜಮೀರ್, ಜಿಲ್ಲಾ ರಕ್ಷಣಾಧಿಕಾರಿ ದಿಲೀಪ್, ಸಿಇಓ ಕೆ. ಸುಬ್ರಾಯ ಕಾಮತ್, ಶಿವಮೊಗ್ಗ ಎಸ್ಪಿ ಕೌಶಲೇಂದ್ರ ಕುಮಾರ್, ಸಿಇಓ ಸಸಿಕಾಂತ್ ಸಂಥಿಲ್, ಕೆಪಿಸಿ ಎಂಡಿ ಕಾಂಬ್ಳೆ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.
ಹಿನ್ನಲೆಯಲ್ಲಿ ಜೋಗ ಪ್ರವೇಶಿಸುವ ಮೂರು ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಸ್ಥಳ ಗುರುತಿಸಲು ಸಚಿವ ದೇಶಪಾಂಡೆ ಸೂಚಿಸಿದರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ನೀಡಿದ ಮಲ್ಟಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಅವರು ಸಕಾರಾತ್ಮಕವಾಗಿ ಸ್ವೀಕರಿಸಿದರು.
ಪ್ರಮುಖ ತೀರ್ಮಾನಗಳು
  ವಿವಿಧ ಇಲಾಖೆಗೆ ಸೇರಿದ ವಸತಿ ಕಟ್ಟಡಳು ಪ್ರಾಧಿಕಾರ ವ್ಯಾಪ್ತಿಗೆ
  ಯಾತ್ರಿ ನಿವಾಸವೂ ಸೇರ್ಪಡೆ
 ತಾರಾ ಹೋಟೆಲ್ ನಿರ್ಮಾಣಕ್ಕಿರುವ ಅಡ್ಡಿ ನಿವಾರಣೆಗೆ ಕ್ರಮ
  ಸರ್ವಋತು ಜಲಪಾತಕ್ಕೆ ಯೋಜನೆ
  ಜೋಗ ಉತ್ಸವ ಆಚರಿಸಲು ನಿರ್ಧಾರ
  ಹಸಿರು ಪೊಲೀಸ್ ರಚನೆಗೆ ಯೋಜನೆ
  ಪ್ರವಾಸಿಗರಿಗಾಗಿ ವಸತಿಗೃಹ ನಿರ್ಮಾಣ
 ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement