ವೃತ್ತಿಯ ಪಾವಿತ್ರ್ಯತೆ ಕಾಪಾಡಿ
ಕ.ಪ್ರ. ವಾರ್ತೆ ಸಾಗರ ಸೆ. 7
ಶಿಕ್ಷಕ ವೃತ್ತಿ ಪಾವಿತ್ರ್ಯತೆಯನ್ನು ಅರ್ಥಮಾಡಿಕೊಂಡು ಅದನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವ ಬಗ್ಗೆ ಶಿಕ್ಷಕ ಬಂಧುಗಳು ನಿಗಾವಹಿಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕ ದಿನಾಚರಣೆ ಅನುಷ್ಠಾನ ಸಮಿತಿ ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿಯಾಶೀಲರಾಗಿರಿ: ಶಾಲೆಗಳು ಕಾರ್ಖಾನೆಗಳಿದ್ದಂತೆ. ಶಿಕ್ಷಕರು ಭವಿಷ್ಯದ ಪ್ರಜೆಗಳನ್ನು ತಯಾರಿಸುವ ಮಾಲೀಕರಿದ್ದಂತೆ. ಮಕ್ಕಳ ಮನಸ್ಥಿತಿ ಅರಿತು ಅವರು ಬಯಸುವ ರೀತಿಯಲ್ಲಿ ಹಾಗೂ ಅರ್ಥವಾಗುವ ರೀತಿಯಲ್ಲಿ ನಿಮ್ಮ ಪಾಠಪ್ರವಚನ ಹಾಗೂ ನಡೆನುಡಿಗಳು ಇರಬೇಕು. ಗುರುತರ ಜವಾಬ್ದಾರಿ ಹೊತ್ತಿರುವ ಶಿಕ್ಷಕ ಬಂಧುಗಳು ಸತ್ಸಾಮಾಜ ನಿರ್ಮಾಣ ಮಾಡುವಲ್ಲಿ ಹೆಚ್ಚು ಕ್ರಿಯಾಶೀಲರಾಗಿರಬೇಕು ಎಂದು ಹೇಳಿದರು.
21ನೇ ಶತಮಾನದಲ್ಲಿರುವ ನಮ್ಮಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೆ ಮುಂದುವರೆದಿದ್ದರೂ ಮೂಢನಂಬಿಕೆ, ಕಂದಾಚಾರ ಸಮಾಜಕ್ಕೆ ಪಿಡುಗಾಗಿಯೆ ಕಾಡುತ್ತಿದೆ. ಮಕ್ಕಳಲ್ಲಿ ವೈಜ್ಞಾನಿಕವಾಗಿ ಚಿಂತಿಸುವ ಮನೋಭಾವ ಬೆಳೆಸಬೇಕಾಗಿದೆ. ಸಾಮಾಜಿಕ ನ್ಯಾಯದಡಿ ಕಡ್ಡಾಯ ಶಿಕ್ಷಣ ಪದ್ಧತಿ ಜಾರಿಯಲ್ಲಿದ್ದು, ಪ್ರತಿಯೊಂದು ಮಗುವನ್ನು ಶಿಕ್ಷಣಕಕ್ಷೆಯಲ್ಲಿ ತರುವ ಮೂಲಕ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ಶಿಕ್ಷಕರು ನಿಭಾಯಿಸಬೇಕು ಎಂದು ತಿಳಿಸಿದರು.
ಒಳ್ಳೆ ಮನಸ್ಸಿರಲಿ: ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ಶಿಕ್ಷಣ ನೀಡುವುದನ್ನು ಶಿಕ್ಷಕರು ವೃತ್ತಿಯಾಗಿ ಪರಿಗಣಿಸದೆ ಅದೊಂದು ಸೇವೆ ಎಂದು ಪರಿಗಣಿಸಬೇಕು. ಶಿಕ್ಷಕರಾದವರಿಗೆ ಸೂಕ್ಷ್ಮ ಹಾಗೂ ಸಂವೇದನಾಶೀಲ ಮನಸ್ಸು ಇರಬೇಕು. ಆಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಚಿಂತಕ ದೇವೇಂದ್ರ ಬೆಳೆಯೂರು, ಶಿಕ್ಷಕರಲ್ಲಿ ಕ್ಷಮಿಸುವ ಹಾಗೂ ಆತ್ಮಾವಲೋಕನ ಮಾಡಿಕೊಳ್ಳುವ ಗುಣ ಬೆಳೆಯಬೇಕು. ಹಿಂದಿನ ಶಿಕ್ಷಣ ಪದ್ಧತಿಗೆ ಜೋತು ಬೀಳದೆ ಪ್ರಸ್ತುತ ಸನ್ನಿವೇಶದಲ್ಲಿ ಸವಾಲುಗಳನ್ನು ಎದುರಿಸುವಂತೆ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು.
ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಗಳನ್ನು, ಸತತ 2 ಬಾರಿ ಇನ್ಸ್ಪೈರ್ ಅವಾರ್ಡ್ ಪಡೆದ ಶಾಲೆಗಳನ್ನು, ರಾಜ್ಯಮಟ್ಟದ ಪರಿಸರ ಮಿತ್ರ ಪ್ರಶಸ್ತಿ ಪಡೆದ ಚಿಕ್ಕಬಿಲಗುಂಜಿ ಶಾಲೆಯ ಮುಖ್ಯಶಿಕ್ಷಕಿಯನ್ನು ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗೌರಮ್ಮ. ಸದಸ್ಯರಾದ ಜ್ಯೋತಿ ಮುರಳಿಧರ್, ಶ್ಯಾಮಲ ದೇವರಾಜ್, ಸುಮಿತ್ರಮ್ಮ, ಶ್ವೇತಾ, ಜಿ.ಪಂ. ಸದಸ್ಯೆ ಸುಮಂಗಲ ರಾಮಕೃಷ್ಣ, ಲಲಿತಾ ನಾರಾಯಣ್, ತಹಸೀಲ್ದಾರ್ ಧರ್ಮೋಜಿರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಾಗರಾಜ್ ಹಾಜರಿದ್ದರು.