ಇಂದೂ ಮುಷ್ಕರ ಮುಂದುವರಿಕೆ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.8
ಭಾರತೀಯ ಪಶುವೈದ್ಯ ಪರಿಷತ್ತಿನ ನೋಂದಣಿಗೆ ಒತ್ತಾಯಿಸಿ ನಗರದ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶನಿವಾರ 5ನೇ ದಿನಕ್ಕೆ ಕಾಲಿಟ್ಟಿದ್ದು, ರಜೆ ದಿನವಾಗಿದ್ದರೂ ಸಹ ಕಾಲೇಜಿನ ಎದುರು ಭಾನುವಾರ ಧರಣಿ ನಡೆಸಿದರು.
ಈ ನಡುವೆ ಶಾಸಕ ಪ್ರಸನ್ನಕುಮಾರ್ ಪಶುವೈದ್ಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರತಿನಿಧಿಗಳೊಂದಿಗೆ ಈ ವಿಷಯವಾಗಿ ಸುದೀರ್ಘ ಚರ್ಚೆ ನಡೆಸಿದರು. ಸಮಸ್ಯೆ ಬಗೆಹರಿಯುವ ಸೂಚನೆ ಇದ್ದು, ಮುಷ್ಕರ ಹಿಂಪಡೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು. ಸಭೆಯಲ್ಲಿದ್ದ ಕಾಲೇಜಿನ ಡೀನ್ ಸಹ ಮುಷ್ಕರ ವಾಪಸು ಪಡೆಯುವಂತೆ ಹೇಳಿದರು.
ಆದರೆ ವಿದ್ಯಾರ್ಥಿಗಳು ಈ ಸಲಹೆಯನ್ನು ಒಪ್ಪಿಲ್ಲ. ಸೋಮವಾರ ಗಣಪತಿ ಹಬ್ಬವಿದ್ದರೂ ಸಹ ಪ್ರತಿಭಟನೆಯನ್ನು ನಿಲ್ಲಿಸದಿರಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದು, ಅಂದೂ ಕಾಲೇಜಿನ ಎದುರು ಪ್ರತಿಭಟನೆ ನಡೆಸಲಿದ್ದಾರೆ.
ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ ಎಂದಿದ್ದಾರೆ. ಸಚಿವ ಟಿ.ಬಿ. ಜಯಚಂದ್ರ ಅವರು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದು, ಈ ಭೇಟಿಯೂ ಸಹ ಕಾಲೇಜಿಗೆ ಹೊಸದಾಗಿ ವಿದ್ಯಾರ್ಥಿಗಳಿಗೆ ಅಡ್ಮಿಷನ್ ದೊರಕಿಸುವುದಕ್ಕೆ ಮಹತ್ವ ನೀಡಿದೆಯೇ ಹೊರತು ಈಗಾಗಲೇ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವುದಕ್ಕೆ ಅಲ್ಲ ಎಂದಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸಿ ನಾಗರಿಕ ಹಿತರಕ್ಷಣಾ ವೇದಿಕೆ, ಅಣ್ಣಾ ಹಜಾರೆ ಹೋರಾಟ ಸಮಿತಿ, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತಿತರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಕೆವಿಸಿ ನೋಂದಣಿ ಭರವಸೆ: ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಸದನದಲ್ಲಿ ಪಶು ವೈದ್ಯಕೀಯ ಸಚಿವ ಜಯಚಂದ್ರ ಅವರು ಕಾಲೇಜಿಗೆ ಮಾನ್ಯತೆ ಪಡೆದು, ಹಾಲಿ ವ್ಯಾಸಂಗ ಮಾಡುತ್ತಿರುವವರಲ್ಲದೆ ಈಗಾಗಲೇ ವ್ಯಾಸಂಗ ಮುಗಿಸಿರುವವರಿಗೆ ಕೆವಿಸಿ ನೋಂದಣಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ಸಮಸ್ಯೆ ಸದ್ಯದಲ್ಲೇ ಬಗೆಹರಿಯುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗಡೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಸಮಸ್ಯೆಯಲ್ಲಿ ಸಿಲುಕುವಂತಾಗಿದೆ. ಸರ್ಕಾರ ಸ್ಪಂದಿಸದಿದ್ದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದರು.