ಗೌರಿ- ಗಣೇಶ ಸಂಭ್ರಮಕ್ಕೆ ಬೆಲೆ ಏರಿಕೆ ವಿಘ್ನ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.9 ಗೌರಿ- ಗಣೇಶ ಹಬ್ಬದ ಪ್ರಯುಕ್ತ ನಗರದೆಲ್ಲಡೆ ಸಡಗರ, ಸಂಭ್ರಮದ ವಾತವರಣವಿದ್ದು, ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಗಣೇಶನ ವಿಗ್ರಹಗಳು ಮನಸೂರೆಗೊಂಡಿವೆ. ಬೆಲೆ ಏರಿಕೆಯ ನಡುವೆ ಜನ ಸಂಭ್ರಮದಿಂದ ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ.
ರುಪಾಯಿ ಅಪಮೌಲ್ಯದಿಂದಾಗಿ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಹೂ, ಹಣ್ಣು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿವೆ. ನಗರದ ಗಾಂಧಿ ಬಜಾರ್, ಬಿ.ಎಚ್. ರಸ್ತೆ, ಶಿವಪ್ಪನಾಯಕ ಬಳಿಯ ಮಾರುಕಟ್ಟೆಗಳಲ್ಲಿ ಭಾನುವಾರ ಮಳೆಯ ನಡುವೆಯೂ ಜನ ವ್ಯಾಪಾರ ಮಾಡಿದರು. ಸೇಬು ಕೆ.ಜೆಗೆ 70ರಿಂದ 150 ರುಪಾಯಿ, ಕಿತ್ತಲೆ 50-60 ರುಪಾಯಿ, ಮೂಸುಂಬೆ 30-50 ರುಪಾಯಿ, ಸಪೋಟ 40- 50 ರುಪಾಯಿ, ದ್ರಾಕ್ಷಿ 80 ರುಪಾಯಿ, ದಾಳಿಂಬೆ 120 ರುಪಾಯಿ ಹಾಗೂ ಹೂ ಮಾರಿಗೆ 50-60 ರುಪಾಯಿ, ಸೇವಂತಿ 60-80 ರುಪಾಯಿ, ಹೂವಿನ ಹಾರ 80- 100 ರುಪಾಯಿಗೆ ಏರಿಕೆಯಾಗಿದೆ.
ಹಬ್ಬದ ದಿನವಾದ ಸೋಮವಾರ ಮತ್ತಷ್ಟು ಬೆಲೆ ಏರಿಕೆಯಾಗುವ ಸಂಭವವಿದೆ ಎನ್ನುತ್ತಾರೆ ಹಣ್ಣು ವ್ಯಾಪಾರಿ ಮೊಹಮದ್ ಸಾಬ್.
ಗಣಪನೂ ದುಬಾರಿ: ನಗರದ ವಿವಿಧೆಡೆ ಗಣಪತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ನಡೆದಿದ್ದು, ಬಹುತೇಕ ಪೆಂಡಾಲ್ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ.
ಗಣೇಶನ ವಿಗ್ರಹಕ್ಕೆ ಬೇಕಾದ ವಸ್ತುಗಳ ಮಣ್ಣು, ಬಣ್ಣಗಳ ಬೆಲೆ ಏರಿಕೆಯಾಗಿರುವುದರಿಂದ ಸಾಮಾನ್ಯವಾಗಿ ಗಣೇಶನ ವಿಗ್ರಹಕ್ಕೆ ಈ ಬಾರಿ ಬೆಲೆ ಹೆಚ್ಚಾಗಿದೆ. ಈಗಾಗಲೇ ಗಣೇಶನ ವಿಗ್ರಹಗಳು ಮಾರುಕಟ್ಟೆಯಲ್ಲಿ ಕಂಡುಬಂದಿದ್ದು, ಹಲವಾರು ಸಂಘ, ಸಂಸ್ಥೆಗಳು ಮುಗಂಡವಾಗಿ ಹಣ ನೀಡಿ ಖರೀದಿಸಿದ್ದಾರೆ. ಅರ್ಧ ಅಡಿ ಗಣಪತಿಗೆ 100 ರಿಂದ 150ರುಪಾಯಿ ನಂತರದ ಗಣಪತಿಗೆ 500 ರುಪಾಯಿಯಿಂದ 15 ಸಾವಿರ ರುಪಾಯಿವರೆಗೆ(ಎತ್ತರದ ಆಧಾರದ ಮೇಲೆ)ಬೆಲೆ ಇವೆ.
ಸೋಮವಾರ ಗಣೇಶ ಚತುರ್ಥಿಯಂದು ಸಾರ್ವಜನಿಕರು ಪೂಜೆ ಬಳಿಕ ಗಣಪತಿ ಮೂರ್ತಿ ವಿರ್ಸಜನೆ ಮಾಡಲಿದ್ದು, ಇದಕ್ಕೆ ನಗರಸಭೆ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ.
ನಗರದ ತುಂಗಾ ಚಾನಲ್ ಮತ್ತು ನದಿಯ ದಂಡೆಯ ಮೇಲಿರುವ ಆಯ್ದ 30ಕ್ಕೂ ಸ್ಥಳಗಳಲ್ಲಿ ಸುರಕ್ಷಾತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬ್ಯಾರಿಕೇಡ್ಗಳು ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿಯೂ ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ನಡೆಸುವ ಕೆಲ ವ್ಯಕ್ತಿಗಳ ಮೇಲೆ ಇಲಾಖೆ ನಿಗಾ ಇಟ್ಟಿದ್ದು, ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಅಲ್ಲದೇ, ಪ್ರತಿ ಗಣಪತಿ ಮೆರವಣಿಗೆಯ ವಿಡಿಯೋ ಮತ್ತು ಫೋಟೋ ತೆಗೆಯಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಡಿ.ಜೆ. ಇಲ್ಲ: ಕಳೆದ ಬಾರಿ ಡಿ.ಜೆ ಹಾವಳಿಯಿಂದ ತತ್ತರಿಸಿದ ಜನರಿಗೆ ಈ ಬಾರಿ ಸ್ವಲ್ಪ ರಿಲೀಫ್ ಸಿಗಲಿದೆ. ಯಾವುದೇ ಸಂಘ, ಸಂಸ್ಥೆಗಳು ಗಣಪತಿ ವಿಸರ್ಜನೆ ವೇಳೆ ಡಿಜೆ ಬಳಸುವಂತಿಲ್ಲ.
ಬಳಸಿದ್ದೆ ಆದಲ್ಲಿ ಅಂತಹ ಸಂಘಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ರಾತ್ರಿ 10 ಗಂಟೆ ನಂತರ ಮೈಕ್ ಸೆಟ್ ಬಳಸುವುದನ್ನು ಇಲಾಖೆ ನಿಷೇಧ ಮಾಡಿದೆ ಎಂದು ಕನ್ನಡಪ್ರಭಕ್ಕೆ ಜಿಲ್ಲಾರಕ್ಷಣಾಧಿಕಾರಿ ಕೌಶಲೇಂದ್ರಕುಮಾರರ್ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ಮುಂದಾಗಿದ್ದು, ಈ ಕಾರ್ಯಕ್ಕೆ ವಿಶೇಷ ತಂಡ ರಚಿಸಲಾಗಿದೆ. ಗಣಪತಿ ಪೆಂಡಾಲ್ ಆಸುಪಾಸಿನಲ್ಲಿ ಕಸದ ರಾಶಿಯನ್ನು ಮತ್ತು ಚರಂಡಿಗಳನ್ನು ಆದ್ಯತೆ ಮೇಲೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ನಗರಸಭೆ ಎಂಜಿನಿಯರ್ಗಳು ತಿಳಿಸಿದ್ದಾರೆ.