ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮನವಿ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.8
ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಸೆ.13ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಸಿಂಹಗಳಾಗಿ ದಿಲ್ಲಿಗೆ ನಡೆಯಿರಿ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿರುವ ಬೃಹತ್ ರ್ಯಾಲಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕಗಳು, ಜಿಲ್ಲೆಯ ರೈತ ಬಾಂಧವರು ಪಾಲ್ಗೊಳ್ಳುವಂತೆ ಸಂಘ ಮನವಿ ಮಾಡಿದೆ.
ರೈತರ ಬೆಳೆಗಳ ಬೆಲೆ ನಿಗಧಿ ಮಾಡುವವರು ರೈತರಲ್ಲ, ದಲ್ಲಾಳಿಗಳು ಮತ್ತು ಮಧ್ಯವರ್ತಿಗಳು. ಹಾಗಾಗಿ ರೈತರಿಗೆ ನಿಗದಿತ ಬೆಲೆ ದೊರೆಯುವುದಿಲ್ಲ. ಆದ್ದರಿಂದ ರೈತ ಬೆಳೆದ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದಲ್ಲಿ ಅರ್ಧದಷ್ಟು ಬೆಲೆ ನಿಗದಿ ಮಾಡುವುದು, ಅತಿವೃಷ್ಟಿ, ಅನಾವೃಷ್ಠಿ, ಹವಾಮಾನ ವೈಪರಿತ್ಯ ಹಾಗೂ ಕಾಡುಪ್ರಾಣಿಗಳಿಂದ ಆಗುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಗ್ಯಾಟ್ ಒಪ್ಪಂದವನ್ನು ವಾಪಸು ಪಡೆಯಬೇಕು, ಅಕ್ಕಿ, ರಾಗಿ, ಜೋಳ, ಗೋದಿ ಬೆಳೆ ಬೆಳೆಯುವ ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಕೊಟ್ಟು ಸರ್ಕಾರವೇ ಖರೀದಿಸಿ ಕೊಡಬೇಕು. ಕೇಂದ್ರ ಸರ್ಕಾರದ ಕೃಷಿ ನೀತಿ ನಿರ್ಣಯ ಸಮಿತಿಯಲ್ಲಿ ಕೃಷಿಗೆ ಪರಿಣಾಮಕಾರಿ ಶಿಫಾರಸ್ಸುಗಳನ್ನು ತರಲು ರೈತರನ್ನು ಒಳಗೊಂಡ ಸಮಿತಿಗಳನ್ನು ರಚಿಸಬೇಕು.
ತಾತ್ಸರ ಮನೋಭಾವ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಫ್‌ಡಿಐಯನ್ನು ರದ್ದು ಮಾಡಬೇಕು. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕೈಗಾರಿಕೆಗಳ, ಕಾರ್ಪೋರೇಟ್ ಕಂಪನಿಗಳ 10 ಲಕ್ಷ ಕೋಟಿ ಸಾಲವನ್ನು ತೆರಿಗೆ ವಿನಾಯ್ತಿ ಹೆಸರಿನಲ್ಲಿ ಮನ್ನಾ ಮಾಡುವ ಕೇಂದ್ರ ಸರ್ಕಾರ, ದೇಶಕ್ಕೆ ಆಹಾರ ಬೆಳೆಯುವ ರೈತರ ಬಗ್ಗೆ ತಾತ್ಸರ ಮನೋಭಾವ ಹೊಂದಿದ್ದು, ಕೇವಲ 60 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲು ಮಿನಾಮೇಷ ಏಣಿಸುತ್ತಿರುವುದು ಏಕೆ ಸೇರಿದಂತೆ ಇತರೆ ಅನೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಸಂಘ ಇಡಲಿದೆ. ಆದ್ದರಿಂದ ಜಿಲ್ಲೆಯಿಂದ ಹೆಚ್ಚಿನ ರೈತರು, ಸಂಘ ಎಲ್ಲಾ ತಾಲೂಕುಗಳ ಸದಸ್ಯರು ಭಾಗವಹಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಟಿ.ವಿ. ಕುಮಾರ್, ಕಾರ್ಯದರ್ಶಿ ಕೆ.ಸಿ. ಸದಾಶಿವಪ್ಪ ತಿಳಿಸಿದ್ದಾರೆ.