ಶಿವಮೊಗ್ಗ-ಅನುಪಿನಕಟ್ಟೆ ರಸ್ತೆ ದುರಸ್ತಿಗೆ ಆಗ್ರಹ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.8
ನಗರದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯವನ್ನು ಅನುಪಿನಕಟ್ಟೆಯ ಘಟಕಕ್ಕೆ ಸಾಗುವ ರಸ್ತೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವ ಕುರಿತು ಶಾಸಕ ಕೆ.ಬಿ. ಪ್ರಸನ್ನಕುಮಾರ್, ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಭಾರತೀ ನಾಗರಾಜ್, ನಗರ ವ್ಯಾಪ್ತಿಯ ತ್ಯಾಜ್ಯವನ್ನು ಅನುಪಿನಕಟ್ಟೆ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಕಸ ಹೊತ್ತೊಯ್ಯುವ ವಾಹನಗಳ ನಿರಂತರ ಓಡಾಟದಿಂದಾಗಿ ಶಿವಮೊಗ್ಗದಿಂದ ಅನುಪಿನಕಟ್ಟೆಯ ಘಟಕದವರೆಗೆ ಸಾಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಉತ್ತಮ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಆಶ್ವಾಸನೆ ಈಡೇರಿಲ್ಲ: ಸ್ಥಳೀಯ ಗ್ರಾಮಸ್ಥ ಹೆಬ್ಬೂರು ನಾಗರಾಜ್ ಮಾತನಾಡಿ, ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಸಂದರ್ಭದಲ್ಲಿ ಅಲ್ಲಿನ ಜನರಿಗೆ ಸಂಪರ್ಕ ರಸ್ತೆ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದರು. ಗ್ರಾಮಸ್ಥರಿಗೆ ನೀಡಿದ ಆಶ್ವಾಸನೆಗಳನ್ನು ಪೂರೈಸಿಲ್ಲ ಎಂದರಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.
ಕಸ ವಿಲೇವಾರಿ ಮಾಡುವ ವಾಹನಗಳು ಟಾರ್ಪಲ್ ಅಥವಾ ನೆಟ್‌ಗಳನ್ನು ಉಪಯೋಗಿಸದೆ ತ್ಯಾಜ್ಯವನ್ನು ಸಾಗಾಟ ಮಾಡುತ್ತಿರುವುದರಿಂದ ಸ್ಥಳೀಯ ನಾಗರೀಕರಿಗೆ ಹಾಗೂ ನಿವಾಸಿಗಳಿಗೆ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದರು.
ಪ್ರತ್ಯೇಕ ಪ್ರಸ್ತಾವನೆ: ಈ ಸಂದರ್ಭದಲ್ಲಿ ಸಮಾಲೋಚನೆ ನಡೆಸಿದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು, ವಾಹನಗಳು ತ್ಯಾಜ್ಯವನ್ನು ಸಾಗಿಸುವ ಸಂದರ್ಭದಲ್ಲಿ ನೆಟ್ ಮತ್ತು ಟಾರ್ಪಲ್ ಬಳಕೆ ಮಾಡುವಂತೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರಿಗೆ ಸೂಚಿಸಿದರು.
ಅಲ್ಲದೇ, ಪುರದಾಳು ಗ್ರಾಮದವರೆಗೂ ರಸ್ತೆ ಅಭಿವೃದ್ಧಿ ಪಡಿಸಬೇಕು. ಟಿಪ್ಪುನಗರದಿಂದ ಅನುಪಿನಕಟ್ಟೆವರೆಗಿನ ರಸ್ತೆ ಕಾಮಗಾರಿಗೆ ಅಂದಾಜು 2ಕೋಟಿ ರುಪಾಯಿ ಅವಶ್ಯಕತೆ ಇದ್ದು, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳಡಿ ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಲಾಯಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ತಾತ್ಕಾಲಿಕವಾಗಿ ಇಲ್ಲಿನ ರಸ್ತೆಗಳ ಗುಂಡಿಗಳನ್ನು ಮುಚ್ಚುವಿಕೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.