ಶೈಕ್ಷಣಿಕ ಕಾಳಜಿಯಿಂದ ಕರ್ತವ್ಯ ನಿರ್ವಹಣೆ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.8
ಪ್ರಸ್ತುತ ಸಮಾಜ ಶಿಕ್ಷಣ ಕ್ಷೇತ್ರದ ಬಗ್ಗೆ ಹೊಂದಿರುವ ಹಲವು ವಿಮರ್ಶೆಗಳ ನಡುವೆಯೂ ಹಸನ್ ಬೆಳ್ಳಿಗನೂಡುರಂತಹ ಹಲವು ಹತ್ತು ಅಧ್ಯಾಪಕರು ನಿಜವಾದ ಶೈಕ್ಷಣಿಕ ಕಾಳಜಿಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಪ್ರಸನ್ನಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸಹಜ ಶೈಕ್ಷಣಿಕ ವಾತಾವರಣದ ಕೊರತೆ ನಡುವೆಯೂ ಇರುವ ಸಂಪನ್ಮೂಲ ಬಳಸಿಕೊಂಡು ಅಧ್ಯಯನ, ಅಧ್ಯಾಪನ, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಸಂವರ್ಧನೆಗೆ ದುಡಿದಿದ್ದಾರೆ ಎಂದು ಹೇಳಿದರು.
ಸಂಕಲನ ಬಿಡುಗಡೆ: ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ವೇದಿಕೆಯಲ್ಲಿ ಸಿರಿಗನ್ನಡ ಪುಸ್ತಕ ಮನೆ ಪ್ರಕಟಿಸಿರುವ ಶಿಕ್ಷಕ ಕವಿ ಹಸನ್ ಬೆಳ್ಳಿಗನೂಡು ಅವರ ಕವನ ಸಂಕಲನ ಕಾಲದ ಗುಲಾಮರು ಕೃತಿ ಬಿಡುಗಡೆ ಮಾಡಿ ಅವರು, ಕಾಲದ ಗುಲಾಮರು ಇಂದಿನ ಸಂಕಿರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಲಕ್ಕೆ ಬಂಧಿಯಾಗಿರುವ ಅನಿವಾರ್ಯತೆಯನ್ನು ಸಾಂಕೇತಿಕವಾಗಿ ಧ್ವನಿಸುತ್ತದೆ ಎಂದರು.
ಕಾಲದ ಪರಿಧಿಯೊಳಗೆ ಬಂಧಿತವಾಗಿ ಕಾಲವನ್ನು ಮೀರಿ ಬೆಳೆಯಲಾರದ ಅತಂತ್ರ ಸ್ಥಿತಿಯ ಪ್ರಸ್ತುತ ಸಂದರ್ಭದಲ್ಲಿ ನಮ್ಮನ್ನು ಕಾಲ ಹೇಗೆ ಬಂಧಿಸಿದೆಯೆಂಬ ಆಶಯ ಹೊತ್ತ ಈ ಕವನ ಸಂಕಲನ ನಿಜಕ್ಕೂ ಅರ್ಥಪೂರ್ಣ ಕೃತಿಯಾಗಿದೆ ಎಂದರು.
ಪ್ರತೀಕಾರವಿಲ್ಲ: ಇಲ್ಲಿನ ಕವಿತೆಗಳಲ್ಲಿ ಪ್ರತಿಭಟನೆಯಿದೆ, ಪ್ರತೀಕಾರವಿಲ್ಲ. ಕೇವಲ ಅಬ್ಬರ, ಆಕ್ರೋಶಗಳೇ ಕವಿತೆಯ ಅಭಿವ್ಯಕ್ತಿ ಲಕ್ಷಣವಾಗದೆ ಕವಿ ಇಲ್ಲಿ ಉಳಿಸಿಕೊಂಡು ಬಂದಿರುವ ವಿನಯ, ವಿವೇಕ, ಸಂಯಮಗಳು ನಿಜಕ್ಕೂ ಮೆಚ್ಚತಕ್ಕ ಅಂಶಗಳಾಗಿವೆ ಎಂದು ಹೇಳಿದರು.
ನಮ್ಮ ಮಾಸ್ತರು ಮಕ್ಕಳ ಪದ್ಯಗಳ ಸಂಗ್ರಹವನ್ನು ಅನಾವರಣಗೊಳಿಸಿದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ನಮ್ಮ ಮಾಸ್ತರು ಶೀರ್ಷಿಕೆಯೇ ಮಕ್ಕಳೊಂದಿಗೆ ಈ ಹಸನ್ ಮಾಸ್ತರಿಗಿರುವ ಆತ್ಮೀಯತೆಯನ್ನು ಪ್ರತಿಬಿಂಬಿಸುವಂತಿದೆ. ಕಳೆದ 25 ವರ್ಷಗಳ ಮಕ್ಕಳ ಒಡನಾಟವೇ ಇಲ್ಲಿ ಪ್ರಾಸಬದ್ಧ ಪದ್ಯಗಳಾಗಿ ಹೊರಹೊಮ್ಮಿದೆ ಎಂದರು.
ಸಿರಿಗನ್ನಡ ಪುಸ್ತಕ ಮನೆ ಹೊರತಂದಿರುವ ಈ ಪುಸ್ತಕಗಳ ಬಿಡುಗಡೆಯಲ್ಲಿ ಶಿಕ್ಷಣ ಆಯುಕ್ತ ಮೊಹಮ್ಮದ್ ಐಸ್ಸೀನ್, ಡಿಡಿಪಿಐ ಕುಮಾರ್, ಬಿಇಒ ಕಮಲಾಕರ್ ಇದ್ದರು.