ಹೆದ್ದಾರಿಗಳ ಅಭಿವೃದ್ಧಿಗೆ ನೆರವು: ಮನವಿ
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.8
ಆಗುಂಬೆ ಘಾಟಿ ರಸ್ತೆಗಳ ವಿಸ್ತರಣೆ ಸೇರಿದಂತೆ ರಾಜ್ಯದ ಹಲವು ಹೆದ್ದಾರಿಗಳ ಅಭಿವೃದ್ಧಿಗೆ ನೆರವು ನೀಡುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಆಗುಂಬೆ ಘಾಟಿ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ವಿಸ್ತರಣೆ ಮಾಡುವ ಯೋಜನೆ ಸಿದ್ಧವಾಗಿದೆ. ಸುಮಾರು 32 ಕೋಟಿ ವೆಚ್ಚದಲ್ಲ 14 ತಿರುವುಗಳೂ ಸೇರಿದಂತೆ ರಸ್ತೆ ವಿಸ್ತರಣೆ ಮಾಡುವ ಯೋಜನೆ ಇದು. ಅರಣ್ಯ ಇಲಾಖೆಯ ಭೂಮಿಯಲ್ಲಿಯೂ ಸಹ ರಸ್ತೆ ಸಾಗಬೇಕಿರುವುದರಿಂದ ಜಂಟಿ ಸರ್ವೇ ನಡೆಯಬೇಕಿದೆ. ಜತೆಗೆ ರಾಜ್ಯದಲ್ಲಿ ಸಾಗುವ ಇತರೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೂ ಸಹ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹಾಗೂ ಮುಖಂಡರು ಇದ್ದರು.