ಗಣೇಶೋತ್ಸವದಿಂದ ಮನಸ್ಸು ಬೆಸೆಯುವ ಕೆಲಸ
ಸಾಗರ: ಸಂಘಟನೆ ಚೌಕಟ್ಟಿನಲ್ಲಿ ನಡೆಯುವ ಗಣೇಶೋತ್ಸವದಂತಹ ಧಾರ್ಮಿಕ ಚಟುವಟಿಕೆಗಳು ಮನಸ್ಸನ್ನು ಬೆಸೆಯುವ ಕೆಲಸ ಮಾಡುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಹೇಳಿದರು.
ಇಲ್ಲಿನ ಶಿವಪ್ಪನಾಯಕ ಯುವಜನ ಸಂಘ 27ನೇ ವರ್ಷದ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಉದ್ಘಾಟಿಸಿ ಮಾತನಾಡಿದರು.
ಯಾವ ಊರಿನಲ್ಲಿ ಸಂಘಟನೆಗಳು ಸುಭದ್ರವಾಗಿರುತ್ತದೆಯೋ ಅಂತಹ ಊರು ಬೇಗ ಅಭಿವೃದ್ಧಿ ಕಾಣುತ್ತದೆ. ಏಕೆಂದರೆ ಸ್ಥಳೀಯ ಸಮಸ್ಯೆ ವಿರುದ್ಧ ಸಂಘಟನೆಗಳು ಧ್ವನಿ ಎತ್ತುವ ಜೊತೆಗೆ ಸಮಾಜದಲ್ಲಿ ಸಾಮರಸ್ಯ ಸ್ಥಾಪಿಸುವ ಕೆಲಸ ಮಾಡುತ್ತವೆ ಎಂದರು.
ವಿಶಿಷ್ಟ ಉತ್ಸವ: ಗಣೇಶೋತ್ಸವ ನಮ್ಮ ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾಗಿದೆ. ಎಲ್ಲಾ ಧರ್ಮಿಯರು ಒಗ್ಗಟ್ಟಾಗಿ ಈ ಉತ್ಸವವನ್ನು ಆಚರಿಸಿಕೊಂಡು ಬರುತ್ತಾರೆ. ಉತ್ಸವ ಸಂದರ್ಭಲ್ಲಿ ಸ್ಥಳೀಯ ಪ್ರತಿಭೆ ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಜೊತೆಗೆ ಹೆಸರಾಂತ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನೀಡುವುದರಿಂದ ಸ್ಥಳೀಯ ಕಲಾವಿದರಿಗೆ ಇನ್ನಷ್ಟು ಪ್ರೇರಣೆ ಸಿಕ್ಕಂತೆ ಆಗುತ್ತದೆ ಎಂದು ಹೇಳಿದರು.
ನ್.ಜಿ.ಪೈ ಮಾತನಾಡಿ, ಯುವ ಸಂಘಟನೆಗಳು ಕ್ರಿಯಾಶೀಲವಾಗಿರಬೇಕು. ಆಗ ಸಮಾಜಮುಖಿ ಚಟುವಟಿಕೆಗಳು ಹೆಚ್ಚು ನಡೆಯುತ್ತದೆ. ಶಿವಪ್ಪನಾಯಕ ಯುವಜನ ಸಂಘ ಕಳೆದ 27 ವರ್ಷದಿಂದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುವ ಮೂಲಕ ಈ ಭಾಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.
ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ ಅಥ್ಲೆಟಿಕ್ ಪಟು ನಿತಿನ್ ಎನ್. ಹಾಗೂ 7ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಕೆ.ಎನ್. ಸುವರ್ಣ, ಜಯಲಕ್ಷ್ಮೀ, ರಂಜನ್ ಹಾಗೂ 10ನೇ ತರಗತಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಕಾವ್ಯ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಚ್.ಬಿ. ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರಾಜು ಮೇಸ್ತ್ರಿ, ನಗರಸಭೆ ಸದಸ್ಯರಾದ ಉಷಾ, ಬೀಬಿ ಫಾಸಿಯಾ, ಎ.ಉಮೇಶ್, ಗಣಾಧೀಶ್ ಹಾಜರಿದ್ದರು.