ವೇತನ ನಿವಾರಣೆಗೆ ಒತ್ತಾಯಿಸಿ ಸಚಿವರಿಗೆ ಮನವಿ
ಶಿವಮೊಗ್ಗ: ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ, ವಿಶೇಷ ಭತ್ಯೆ, ಗಳಿಕೆ ರಜೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘವು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ಬುಧವಾರ ತೀರ್ಥಹಳ್ಳಿಯಲ್ಲಿ ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಿದರು. ನಂತರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕೆ. ಕೃಷ್ಣಪ್ಪ, ಸಚಿವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು.
ಅನ್ಯಾಯ ಸರಿಪಡಿಸಿ: ಪ್ರಾಥಮಿಕ ಶಾಲೆಗಳ ಪದವೀಧರೇತರ ಮುಖ್ಯ ಶಿಕ್ಷಕರಿಗೆ 300 ವಿಶೇಷ ಭತ್ಯೆ ಇದೆ. ಆದರೆ ಇದೇ ಶ್ರೇಣಿಯಲ್ಲಿರುವ ಪ್ರೌಢಶಾಲಾ ಸಹ ಶಿಕ್ಷಕರಿಗೆ 400 ವಿಶೇಷ ಭತ್ಯೆ ಇದೆ. ಈ ತಾರತಮ್ಯ ನಿವಾರಿಸಿ ನಮಗೂ 400 ಭತ್ಯೆ ನೀಡಬೇಕು ಎಂದ ಕೃಷ್ಣಪ್ಪ, ಪದವೀಧರೇತರ ಮುಖ್ಯಶಿಕ್ಷಕರಾದ ಮಾತ್ರಕ್ಕೆ ಸರ್ಕಾರಿ ನೌಕರರಿಗೆ ಒಂದೇ ಹುದ್ದೆಯಲ್ಲಿ 20 ವರ್ಷ, 25 ವರ್ಷ, 30 ವರ್ಷ ಸಲ್ಲಿಸಿದರೆ ನೀಡುವ ವಿಶೇಷ ಭತ್ಯೆ ನೀಡುತ್ತಿಲ್ಲ. ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ನೀಡುವಂತೆ 30 ದಿನ ಗಳಿಕೆ ರಜೆ ನೀಡುತ್ತಿಲ್ಲ. ಈ ಬಗ್ಗೆ ಗಮನ ಗಮನ ಹರಿಸಿ ಅನ್ಯಾಯ ಸರಿಪಡಿಸಬೇಕು ಎಂದು ಕೋರಿದರು.
ಉನ್ನತೀಕರಿಸಿದ ಶಾಲೆಗಳಿಗೆ ಪರವೀಧರೇತರ ಮುಖ್ಯ ಶಿಕ್ಷಕರನ್ನು ನೇಮಿಸಬೇಕು. ಸಿಆರ್ಪಿ ಹಾಗೂ ಬಿಆರ್ಪಿ ಹುದ್ದೆಗಳನ್ನು ಮೇಲ್ದರ್ಜೆಗೇರಿಸಿ ಈ ಹುದ್ದೆಗಳನ್ನು ಬಡ್ತಿ ಮುಖ್ಯ ಶಿಕ್ಷಕರಿಗೆ ನೀಡಬೇಕು. ಈ ಹಿಂದೆ ಇದ್ದಂತೆ 60ಕ್ಕಿಂತ ಹೆಚ್ಚು ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮುಖ್ಯ ಶಿಕ್ಷಕರನ್ನು ನೇಮಿಸಬೇಕು. ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಇಲಾಖಾ ಮಟ್ಟದ ಸಭೆಗೆ ಆಹ್ವಾನಿಸಬೇಕು. ಪ್ರಾಥಮಿಕ ಶಾಲೆಗಳಿಗೆ ಡಿ ದರ್ಜೆ ನೌಕರರನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್. ಅಶ್ವತ್ಥಯ್ಯ, ಜಿಲ್ಲಾಧ್ಯಕ್ಷ ಸಂಪತ್ ಕುಮಾರ್, ಕಾರ್ಯದರ್ಶಿ ಬಸವರಾಜ ಹಿರೇಮಠ, ರಾಜ್ಯ ಪರಿಷತ್ ಸದಸ್ಯ ಚನ್ನಮಲ್ಲಪ್ಪ, ಪ್ರಮುಖರಾದ ಜಿ. ಚಂದ್ರಶೇಖರ್, ದೊಡ್ಡಗೌಡರು, ವೆಂಕಟೇಶಮೂರ್ತಿ ಮತ್ತಿತರರು ಇದ್ದರು.