ಶಿವಮೊಗ್ಗಕ್ಕೆ ಜಿಲ್ಲಾಸ್ಪತ್ರೆ ವಾಪಸ್ಸಾಗದಿದ್ದರೆ ಹೋರಾಟ'
ಶಿವಮೊಗ್ಗ: ಜಿಲ್ಲಾ ಆಸ್ಪತ್ರೆಯನ್ನು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ವಾಪಸ್ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ವಿ. ಭಗವಾನ್ ಎಚ್ಚರಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆ ಶಿಕಾರಿಪುರಕ್ಕೆ ಸ್ಥಳಾಂತರಗೊಂಡಿದ್ದರಿಂದ ಬಡರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಜಿಲ್ಲಾ ಆಸ್ಪತ್ರೆಯನ್ನು ಈ ಹಿಂದಿನಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲೇ ಮುಂದುವರೆಸಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಕ್ರಮ ಕೈಗೊಂಡಿಲ್ಲ: ಆ.15ರೊಳಗೆ ಜಿಲ್ಲಾ ಆಸ್ಪತ್ರೆಯನ್ನು ಮರಳಿ ಶಿವಮೊಗ್ಗಕ್ಕೆ ನೀಡದಿದ್ದರೆ ಉಗ್ರಹೋರಾಟ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ, ಹೋರಾಟಕ್ಕೆ ಅವಕಾಶ ನೀಡದೆ ಪೊಲೀಸರು ಅಕ್ರಮವಾಗಿ ತಮ್ಮನ್ನು ಬಂಧಿಸಿದ್ದರು. ನಂತರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.
ಸೆ.5ರಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಶಾರದಾ ಪೂರ್ಯಾನಾಯ್ಕ್ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಜಿಲ್ಲಾಡಳಿತ ಕೂಡ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಜಿಲ್ಲಾ ಆಸ್ಪತ್ರೆಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲೆ ಮರು ಸ್ಥಾಪಿಸಬೇಕು. ಅಲ್ಲದೇ, ಸಿಮ್ಸ್ ನಿರ್ದೇಶಕ ಗಂಗಾಧರ್ ಅವರನ್ನು ಅಮಾನತುಗೊಳಿಸಿ ಅವರ ಮೇಲಿರುವ ಭ್ರಷ್ಟಾಚಾರದ ತನಿಖೆಯನ್ನು ಲೋಕಾಯುಕ್ತರಿಗೆ ಒಪ್ಪಿಸಬೇಕು ಎಂದರು.
ಒಂದು ವೇಳೆ ಜಿಲ್ಲಾ ಆಸ್ಪತ್ರೆ ಮರಳಿ ಸ್ಥಾಪನೆ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ನಗರದ ಬೀದಿಬೀದಿಗಳಲ್ಲಿ ಹೋರಾಟ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಮಾರ್, ಜುಬೇರ, ಅಹಮದ್, ಮೊಹಮ್ಮದ್, ಯಶವಂತರಾವ್, ಖಾದರ್, ಮಹಿಳಾ ಮುಖಂಡರಾದ ಉಷಾದೇವಿ ಮತ್ತಿತರರು ಇದ್ದರು.