ಅತಿ ವೃಷ್ಟಿ; ರು. 79 ಲಕ್ಷ ಪರಿಹಾರ ವಿತರಣೆ
ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿದ ಬಾರಿ ಮಳೆಗೆ ಜಿಲ್ಲೆಯ ಅಡಕೆ ತೋಟಗಳು ಕೊಳೆರೋಗದಿಂದ ಸಂಪೂರ್ಣ ಹಾಳಾಗಿದ್ದು, ಈಗಾಗಲೇ ಪ್ರಕೃತಿ ವಿಪತ್ತು ಪರಿಹಾರ ನಿಧಿ(ಸಿಆರ್ಎಫ್)ಯಿಂದ ಕೆಲ ಸಂತ್ರಸ್ಥರಿಗೆ 79 ಲಕ್ಷ ರುಪಾಯಿ ಪರಿಹಾರ ಹಣ ವಿತರಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿ 75,572 ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ 45,141 ಹೆಕ್ಟೇರ್ನಲ್ಲಿ ಅಡಕೆ ಬೆಳೆ ಬೆಳೆಯುತ್ತಿದ್ದಾರೆ. ಅವುಗಳಲ್ಲಿ ಈಗಾಗಲೆ ಜಿಲ್ಲೆಯಲ್ಲಿ 19,355 ಹೆಕ್ಟೇರ್ ಕೊಳೆರೋಗ ಬಾಧಿತ ಪ್ರದೇಶವೆಂದು ಗುರುತಿಸಲಾಗಿದ್ದು, ಉಳಿದಂತೆ ಕೊಳೆರೋಗ ಭಾಧಿತ ಪ್ರದೇಶವನ್ನು ಗುರುತಿಸುವ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂದರು.
ಶೇ.45ರಷ್ಟು ಹೆಚ್ಚುವರಿ ಮಳೆ: ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಶೇ.45ರಷ್ಟು ಹೆಚ್ಚುವರಿ ಮಳೆಯಾಗಿದೆ. ನಿರಂತರ ಮಳೆ ಬೀಳುತ್ತಿದ್ದರಿಂದ ಕೊಳೆರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸಲು ರೈತರಿಗೆ ಸಾಧ್ಯವಾಗಲಿಲ್ಲ. ಇದರಿಂದ ಅಡಕೆ ತೋಟಗಳು ಕೊಳೆರೋಗಕ್ಕೆ ತುತ್ತಾಗಿವೆ ಎಂದರು. ಕೊಳೆರೋಗದ ಪರಿಹಾರಕ್ಕಾಗಿ 35,810 ಅರ್ಜಿಗಳು ಈಗಾಗಲೇ ಬಂದಿದ್ದು, 9,460 ಅರ್ಜಿಗಳನ್ನು ಪರಿಶೀಲಿಸಲಾಗಿದೆ ಎಂದ ಅವರು, ಪ್ರಕೃತಿ ವಿಪತ್ತು ಪರಿಹಾರ ನಿಧಿಯಿಂದ ಪ್ರತಿ ಹೆಕ್ಟೇರ್ಗೆ 12 ಸಾವಿರ ರುಪಾಯಿ ಪರಿಹಾರ ನಿಗಧಿಪಡಿಸಲಾಗಿದೆ. ಈ ಸಂಬಂಧ 35,810 ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ 9,460 ಅರ್ಜಿಗಳನ್ನು ಪರಿಶೀಲಿಸಿದೆ. ಈ ಪೈಕಿ 79 ಲಕ್ಷ ರುಪಾಯಿ ಪರಿಹಾರವನ್ನು ಈಗಾಗಲೇ ಸಂತ್ರಸ್ಥರಿಗೆ ವಿತರಿಸಲಾಗಿದೆ ಎಂದರು.
ಬೆಳೆಗಳು ನಾಶ: ಕೊಳೆರೋಗ ಬಾಧಿತ ತೋಟಗಳ ರೈತರು ಅರ್ಜಿಯನ್ನು ಸಲ್ಲಿಸುವಾಗ ಫೋಟೋ ನೀಡುವ ಅಗತ್ಯವಿಲ್ಲ. ಅದೇ ರೀತಿ ತೋಟಗಾರಿಕೆ ಇಲಾಖೆಗೆ ಅರ್ಜಿ ನೀಡಬೇಕೆಂದಿಲ್ಲ. ಸ್ಥಳೀಯ ನಾಡ ಕಚೇರಿಯಲ್ಲಿಯೂ ಅರ್ಜಿ ನೀಡಬಹುದು ಎಂದರಲ್ಲದೇ, ಅಡಕೆ ಬೆಳೆ ಅಲ್ಲದೆ, 498 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, ಶುಂಠಿ ಹಾಗೂ ಕಾಳು ಮೆಣಸು ತೋಟಗಾರಿಕೆ ಬೆಳೆಗಳು ನಾಶವಾಗಿರುವ ಬಗ್ಗೆ ಮಾಹಿತಿ ಇದ್ದು, ಶುಂಠಿ ಹೆಕ್ಟೇರ್ಗೆ 4,500 ರುಪಾಯಿ, ಬಾಳೆ ಹೆಕ್ಟೇರ್ಗೆ 9 ಸಾವಿರ ರುಪಾಯಿ ಪರಿಹಾರ ಹಣ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಕೃಷಿ: ಜಿಲ್ಲೆಯಲ್ಲಿ 1,76,207 ಹೆಕ್ಟೇರ್ ಕೃಷಿ ಭೂಮಿಯಿದ್ದು, ಬೆಳೆ ಹಾನಿ ಸಂಬಂಧಿಸಿದಂತೆ 9,385 ಅರ್ಜಿಗಳು ಬಂದಿವೆ. ಈ ಪೈಕಿ 7 ಸಾವಿರ ಎಕರೆಗೆ ಬೆಳೆಹಾನಿ ಪರಿಹಾರವಾಗಿ 148 ಲಕ್ಷ ರುಪಾಯಿ ವಿತರಣೆ ಮಾಡಲಾಗಿದೆ. ಉಳಿದಂತೆ ಬೆಳೆ ಹಾನಿಗೊಳಗಾದವರು ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನವಾಗಿದೆ ಎಂದು ತಿಳಿದರು.
ಮಳೆ ಹಾನಿ ಕುರಿತು ಸಮೀಕ್ಷೆ ಕಾರ್ಯ ಮುಂದುವರೆದಿದ್ದು, ಹಾನಿಗೊಳಗಾದ ಎಲ್ಲಾ ಸಂತ್ರಸ್ಥರಿಗೂ ಪರಿಹಾರ ಸಿಗಲಿದೆ. ಅಂತೆಯೇ ಹಾನಿ ಪರಿಶೀಲಿಸುತ್ತಿರುವ ಅಧಿಕಾರಿಗಳು ಅರ್ಜಿ ಹಾಕದೇ ಇರುವವರ ತೋಟಗಳಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಂತೆ ತಿಳಿಸಲಾಗಿದ್ದು, ಈ ಸಂಬಂಧ ಆಯಾ ತಹಸೀಲ್ದಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ನಿರ್ದೇಶಕ ವಿಶ್ವನಾಥ್ ಇದ್ದರು.