ಟೆಂಡರ್ ಮಿತಿ ಇಳಿಕೆ: ಪ್ರತಿಭಟನೆ
ಶಿವಮೊಗ್ಗ: ಟೆಂಡರ್ ಕರೆಯದೆ 5 ಲಕ್ಷದವರೆಗಿನ ಕಾಮಗಾರಿಯನ್ನು ಕೈಗೊಳ್ಳಲು ಜಿಲ್ಲಾ ಪಂಚಾಯಿತಿಗೆ ಇದ್ದಂತಹ ಮಿತಿಯನ್ನು 1 ಲಕ್ಷಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಜಿಲ್ಲಾ ಪಂಚಾಯ್ತಿಯ ಬಿಜೆಪಿ, ಜೆಡಿಎಸ್ ಹಾಗೂ ಕೆಜೆಪಿ ಬೆಂಬಲಿತ ಸದಸ್ಯರು ಬಾವಿಗಿಳಿದು ಪ್ರತಿಭಟನೆ ಮಾಡಿದ್ದರಿಂದ ಸಾಮಾನ್ಯ ಸಭೆಯು ಶುರುವಾದ ಅರ್ಧ ಗಂಟೆಯಲ್ಲಿಯೇ ಮುಂದೂಡಲ್ಪಟ್ಟಿತು.
ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆಯೇ ಜಿ.ಪಂ ಸದಸ್ಯ ಅಶೋಕ ನಾಯ್ಕ ವಿಷಯ ಪ್ರಸ್ತಾಪಿಸಿ, ಶಾಸಕರು, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಇಲ್ಲದ ನಿರ್ಬಂಧ ಜಿಲ್ಲಾ ಪಂಚಾಯಿತಿಗೆ ಏಕೆ 1 ಲಕ್ಷ ಮೊತ್ತದ ಕಾಮಗಾರಿಗೂ ಟೆಂಡರ್ ಪ್ರಕ್ರಿಯೆ ನಡೆಸುವುದರಿಂದ ಸಣ್ಣ ಪುಟ್ಟ ಕಾಮಗಾರಿಗೂ ವಿಳಂಬವಾಗುತ್ತವೆ. ಇದ್ದರಿಂದ ಜಿ.ಪಂ ಸದಸ್ಯರನ್ನು ಜನರು ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದಲೇ ಕಾಮಗಾರಿಯೊಂದು 2 ವರ್ಷಗಳಿಂದ ಸ್ಥಗಿತಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ: ಇವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಬಿಜೆಪಿ, ಜೆಡಿಎಸ್ನ ಸದಸ್ಯರು ವೇದಿಕೆ ಮುಂಭಾಗದಲ್ಲಿ ಧರಣಿ ಆರಂಭಿಸಿದರು. ಕೊನೆಗೆ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟೀಕರಣ ದೊರೆಯುವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯನ್ನೂ ಕೂಗಿದರು. ಒಂದು ಹಂತದಲ್ಲಿ ಜಿ.ಪಂ. ವಿರೋಧ ಪಕ್ಷದ ನಾಯಕ ಕಲಗೋಡು ರತ್ನಾಕರ್ ಹಾಗೂ ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಜಿಲ್ಲೆಯಲ್ಲಿ ಬೆಂಗಳೂರು ಮೂಲದ ಗುತ್ತಿಗೆದಾರರೊಬ್ಬರು ಕಾಮಗಾರಿಯೊಂದಕ್ಕೆ ಟೆಂಡರ್ ಪಡೆದಿದ್ದು, ಇನ್ನೂ ಕೆಲಸ ಮುಗಿಸಿಲ್ಲ. ಇದನ್ನು ನಾವು ಯಾರಿಗೆ ಕೇಳಬೇಕು ಎಂದ ಅವರು, ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಬೇಕು. ಈ ಹಿಂದಿನಂತೆಯೇ ಐದು ಲಕ್ಷ ರು.ಗಿಂತ ಹೆಚ್ಚು ಮೌಲ್ಯದ ಕಾಮಗಾರಿಯನ್ನು ಮಾತ್ರ ಟೆಂಡರ್ ಪ್ರಕ್ರಿಯೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಸದಸ್ಯರ ವಾಗ್ವಾದ: ಸಭೆ ಪ್ರಾರಂಭವಾಗಿ ಕೆಲ ಹೊತ್ತಿನಲ್ಲಿಯೇ ಆರಂಭಗೊಂಡು ಈ ಗೊಂದಲ ಸುಮಾರು 15- 20 ನಿಮಿಷಗಳು ಸಭೆಯ ಸಮಯವನ್ನು ನುಂಗಿ ಹಾಕಿತು. ಪ್ರತಿಭಟನಾಕಾರರು, ಅಧ್ಯಕ್ಷರು, ಇತ್ತ ಕಾಂಗ್ರೆಸ್ ಸದಸ್ಯರು ಪರಸ್ಪರ ವಾಗ್ವಾದ ಮಾಡುತ್ತಿದ್ದರು. ಈ ವೇಳೆ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಆರ್.ಕೆ ಸಿದ್ದರಾಮಣ್ಣ, ಭಾನುಪ್ರಕಾಶ್, ಪಿ.ವಿ. ಕೃಷ್ಣಭಟ್ ಸಭೆಯಿಂದ ಹೊರ ನಡೆದರು.
ನಂತರ ಜಿ.ಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಒಟ್ಟಾಗಿ ಸಭೆ ಸೇರಿ ಈ ಬಗ್ಗೆ ಚರ್ಚಿಸಿದ್ದೇವೆ. ಅಲ್ಲದೇ, ಅಧ್ಯಕ್ಷರ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಹಾಗೂ ಪಂಚಾಯತ್ ರಾಜ್ ಸಚಿವರನ್ನು ಭೇಟಿಯಾಗಿ ಈ ಆದೇಶವನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ ಎಂದು ಪ್ರತಿಭಟನಾಕಾರರು ಧರಣಿ ಮುಂದುವರೆಸಿದರು. ಸಭೆ ನಿಯಂತ್ರಣಕ್ಕೆ ಬಾರದ ಕಾರಣ ಅಧ್ಯಕ್ಷರು ಸಭೆಯನ್ನು ಅನಿರ್ಧಿಷ್ಟಾವಧಿ ಮುಂದೂಡಿದರು. ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷೆ ಹೇಮಪಾವನಿ, ಜಿ.ಪಂ ಸಿಇಒ ಸಸಿಕಾಂತ್ ಸೆಂಥಿಲ್ ಮುಂತಾದವರಿದ್ದರು.