'ದೇಶದ ಬಗ್ಗೆ ಗಂಭೀರವಾಗಿ ಚಿಂತಿಸಿ'
ಕ.ಪ್ರ.ವಾರ್ತೆ, ಶಿಕಾರಿಪುರ, ಸೆ.12
ನೆರೆಯ ದೇಶದಿಂದ ಉಗ್ರಗಾಮಿಗಳು ನಿತ್ಯ ನುಸುಳುವ ಮೂಲಕ ದೇಶದ ಭದ್ರತೆಗೆ ಸವಾಲಾಗಿದ್ದು, ಹಲವು ಯೋಧರು ಉಗ್ರರ ಗುಂಡಿಗೆ ಬಲಿಯಾಗುತ್ತಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಗಣನೀಯವಾಗಿರುವ ಯುವ ಪೀಳಿಗೆ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಗುರುವಾರ ಸಂಜೆ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೈತ್ರಾದೇವಿ ಕ್ರೀಡಾಂಗಣದಲ್ಲಿ ಕಳೆದ 2 ದಿನದಿಂದ ನಡೆದ ತಾಲೂಕು ಮಟ್ಟದ ಪ.ಪೂ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತಮ ಸಾಧನೆ: ಇತ್ತೀಚಿನ ವರ್ಷದಲ್ಲಿ ಪದವಿಪೂರ್ವ ಶಿಕ್ಷಣ ಹೈಸ್ಕೂಲು ವಿಭಾಗದಿಂದ ಪ್ರತ್ಯೇಕಗೊಂಡ ಹಿನ್ನಲೆಯಲ್ಲಿ ಹಲವು ಶಾಲೆಗಳಲ್ಲಿನ ದೈಹಿಕ ಶಿಕ್ಷಕರ ಕೊರತೆ ಮಧ್ಯೆ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಹಲವು ಕ್ರೀಡೆಗಳನ್ನು ಅಭ್ಯಸಿಸಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಸಾಧನೆಯನ್ನು ಮೆರೆದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಕ್ರೀಡೆ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿಸುವ ದಿಸೆಯಲ್ಲಿ ಸಂಸದ ರಾಘವೇಂದ್ರ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದರು.
ಪ್ರಾಸ್ಥಾವಿಕವಾಗಿ ಬಾಲಕಿಯರ ಸ.ಪ.ಪೂ ಕಾಲೇಜು ಪ್ರಾಚಾರ್ಯ ಪ್ರಕಾಶ್ ಬಾಬು ಮಾತನಾಡಿದರು.
ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ನಿರ್ದೇಶಕಿ ತೇಜಸ್ವಿನಿ, ಮುಖಂಡ ಹಾಲಪ್ಪ, ರುದ್ರಪ್ಪಯ್ಯ,ಪ್ರೇಮ್ ಕುಮಾರ್ ಗೌಡ, ಸುರೇಶ್ ಧಾರವಾಡದ, ಬಹುಮಾನದ ಪ್ರಾಯೋಜಕ ರಾಷ್ಟ್ರಪ್ರಶಸ್ತಿ ವಿಜೇತ ಕೃಷಿಕ ಎನ್.ವಿ. ವೀರೇಶ್, ಸ್ಥಳೀಯ ಕೆನರಾ ಬ್ಯಾಂಕ್ ಪ್ರಬಂಧಕ ಲಕ್ಷ್ಮಣಪ್ಪ, ಪ್ರಾಚಾರ್ಯರಾದ ಜಯಶ್ರೀ, ವೀರೇಂದ್ರ, ಕುಬೇರಪ್ಪ, ವಿರೂಪಾಕ್ಷಪ್ಪ, ಭುಜಂಗಪ್ಪ, ವಿದ್ಯಾಶಂಕರ್ ದೈಹಿಕ ಶಿಕ್ಷಕ ರವಿಕುಮಾರ್ ಮೊದಲಾದವರು ಉಪಸ್ಥಿತಿರಿದ್ದರು.
ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಸಂಸದ ರಾಘವೇಂದ್ರ ಬಹುಮಾನ ಹಾಗೂ ಟ್ರೋಫಿಯನ್ನು ವಿತರಿಸಿದರು.