ಯುವ ಕ್ರೀಡಾ ಔರ್ ಖೇಲ್ ಅಭಿಯಾನ
ಶಿವಮೊಗ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾಡಳಿತ, ಜಿಪಂ, ತಾಪಂ ಹಾಗೂ ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಶಿಕಾರಿಪುರ ತಾಲೂಕು ಮಟ್ಟದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ ಕ್ರೀಡಾಕೂಟವನ್ನು ಸೆಪ್ಟಂಬರ್ 17 ಮತ್ತು 18ರಂದು ಶಿಕಾರಿಪುರ ತಾಲೂಕು ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಆಸಕ್ತ ಕ್ರೀಡಾಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ ಕ್ರೀಡೆಗಳನ್ನು ಸಂಘಟಿಸಲಾಗುವುದು. ಕ್ರೀಡಾಕೂಟದಲ್ಲಿ ಭಾಗವಹಿಸಲಿಚ್ಚಿಸುವವರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವವರಾಗಿದ್ದು, 16 ವರ್ಷ ವಯೋವುತಿಯೊಳಗಿನವರಾಗಿರಬೇಕು. ಕ್ರೀಡಾಳುಗಳು ತಮ್ಮ ಶಾಲೆಯ ಮುಖ್ಯೋಪಾದ್ಯಾಯರಿಂದ ದೃಢೀಕರಣ ಪತ್ರ ಹಾಗೂ ಸಂಬಂಧಪಟ್ಟ ಗ್ರಾಪಂ ಕಾರ್ಯದರ್ಶಿಯವರಿಂದ ವಾಸಸ್ಥಳದ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸಬೇಕು. ವಿದ್ಯಾರ್ಥಿಗಳಲ್ಲದವರು ವಾಸಸ್ಥಳದ ಮತ್ತು ವಯಸ್ಸಿನ ದೃಢೀಕರಣವನ್ನು ತಾಲೂಕಿನ ತಹಸೀಲ್ದಾರರಿಂದ ಪಡೆದು ಸಲ್ಲಿಸಬೇಕು. ಅಥ್ಲೆಟಿಕ್ಸ್ ವಿಭಾಗದಲ್ಲಿ ಒಬ್ಬರು 3 ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ. ಆಸಕ್ತ ಕ್ರೀಡಾಪಟುಗಳು ಸ್ಪರ್ಧೆಗಳು ನಡೆಯುವ ದಿನಾಂಕದಂದು ಬೆಳಿಗ್ಗೆ 9 ಗಂಟೆಯೊಳಗಾಗಿ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ವಿವರಗಳಿಗಾಗಿ ಎ.ಜಿ. ಗಣೇಶಪ್ಪ, ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು, ಶಿಕಾರಿಪುರ ಇವರನ್ನು ಸಂಪರ್ಕಿಸಬಹುದು.