ಲೀ-ನಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ
ಶಿವಮೊಗ್ಗ: ಜಿಲ್ಲಾ ಒಲಂಪಿಕ್ ಸಂಸ್ಥೆ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರದಿಂದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಲೀ-ನಿಂಗ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಚಾಲನೆ ನೀಡಿದರು.
ನಂತರ ಅವರು, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಮುಖ್ಯ. ಕ್ರೀಡೆಯಿಂದ ಕ್ರೀಡಾಪಟುಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ. ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಯಶಸ್ವಿಯಾಗಬೇಕಾದರೆ ಅವಕಾಶಗಳು ಹೆಚ್ಚಾಗಿ ದೊರೆಯಬೇಕು ಎಂದರು.
ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಪ್ರೋತ್ಸಾಹ ನೀಡಿದರೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವುದಕ್ಕೆ ಸಹಾಯಕಾರಿಯಾಗಲಿದೆ.ಇದಕ್ಕೆ ಪೋಷಕರು, ಸಂಘ, ಸಂಸ್ಥೆಗಳು ಎಲ್ಲರೂ ಸಹಕರಿಸಬೇಕು ಎಂದ ಅವರು, ದೇಶದಲ್ಲಿರುವ ಎಲ್ಲಾ ಕ್ರೀಡೆಗಳಿಗೂ ಸಮಾನವಾದ ಗೌರವಗಳನ್ನು ನೀಡಬೇಕು. ಯಾವುದೇ ಕ್ರೀಡೆಯನ್ನು ತಿರಸ್ಕಾರ ಭಾವನೆಯಿಂದ ನೋಡದೇ, ಪ್ರತಿಯೊಂದು ಕ್ರೀಡೆಗೂ ಪ್ರಾಮುಖ್ಯತೆ ನೀಡುವುದು ಬಹುಮುಖ್ಯ ಎಂದರು.
ಗ್ರಾಮೀಣ ಭಾಗದಲ್ಲಿಯೂ ಕ್ರೀಡಾಪಟುಗಳು ಉತ್ತಮವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಅವರಿಗೆ ಪ್ರೋತ್ಸಾಹ ದೊರೆಯದೆ ಎಲೆಮರೆಕಾಯಿಯಾಗಿದ್ದಾರೆ.
ಹಾಗಾಗಿ ಸಂಘ, ಸಂಸ್ಥೆಗಳು, ಕ್ರೀಡಾ ಇಲಾಖೆ ಅಧಿಕಾರಿಗಳು ಅಂತಹ ಕ್ರೀಡಾಪಟುಗಳನ್ನು ಗುರುತಿಸಿ ಅವಕಾಶ ನೀಡಿ, ಬೆಳೆಸಬೇಕಿದೆ ಎಂದು ತಿಳಿಸಿದರು.
ಕ್ರೀಡಾಕೂಟದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ ರಾಘವೇಂದ್ರ, ಎ.ಐ.ಸಿ.ಸಿ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಒಲಂಪಿಕ್ ಸಂಸ್ಥೆ ಉಪಾಧ್ಯಕ್ಷ ಡಿ.ಎಸ್. ಅರುಣ್ ಇದ್ದರು.