ಆಯುರ್ವೇದದಿಂದ ಉತ್ತಮ ಆರೋಗ್ಯ
ಸಾಗರ: ಆಯುರ್ವೇದ ಪದ್ಧತಿಯಿಂದ ಆರೋಗ್ಯಪೂರ್ಣ ಜೀವನ ಸಾಧ್ಯ ಎಂದು ಹಿರಿಯ ನ್ಯಾಯವಾದಿ ಕೆ.ಎಸ್. ಹೆಗಡೆ ಹೇಳಿದರು.
ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಶಾಲೆಯಲ್ಲಿ ಶನಿವಾರ ಆಪ್ಯಂ ಆಯುರ್ವೇದ ಫೌಂಡೇಶನ್ ಹಾಗೂ ಹೊಂಗಿರಣ ಶಾಲೆ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಎರಡು ದಿನಗಳ ಆಯುರ್ವೇದ ತಿಳುವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಆಧುನಿಕ ವೈದ್ಯ ವಿಜ್ಞಾನದತ್ತ ಆಕರ್ಷಿತರಾಗಿರುವ ನಾವು ನಮ್ಮ ಪೂರ್ವಿಕರು ಹಾಕಿಕೊಟ್ಟ ಆಯುರ್ವೇದ ಪದ್ಧತಿಯನ್ನು ಮರೆತಿದ್ದೇವೆ. ಜಂಕ್ ಫುಡ್‌ಗಳನ್ನು ಹೆಚ್ಚು ಉಪಯೋಗಿಸುವುದು, ಇಂಗ್ಲೀಷ್ ಔಷಧಿಗಳ ಸೇವನೆಯಿಂದಾಗಿ ನಾವು ಸುಲಭವಾಗಿ ಗೆಲ್ಲಬಹುದಾದ ಕಾಯಿಲೆಗಳಿಂದ ವರ್ಷಗಟ್ಟಲೆ ನೋವು ಅನುಭವಿಸುವ ಸ್ಥಿತಿ ತಂದುಕೊಂಡಿದ್ದೇವೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಪ್ಯಂ ಫೌಂಡೇಶನ್ ಅಧ್ಯಕ್ಷ ಡಾ. ನಿರಂಜನ ಹೆಗಡೆ, ಜೀವನಕ್ರಮ ಬದಲಾವಣೆ ಜನಜೀವನದ ಮೇಲೆ ಪರಿಣಾಮ ಬೀರಿದೆ. ಕೆಳಗಿನ ಹಂತದಿಂದ ಆಯುರ್ವೇದವನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ಆಯುರ್ವೇದ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಭಾಗಗಳ 10ಕ್ಕೂ ಹೆಚ್ಚು ಪ್ರದೇಶದಲ್ಲಿ ಶಿಬಿರ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಸ್ಥೆ ಶೋಭಾ ರವೀಂದ್ರ, ಉದ್ಯಮಿ ಮಾರುತೇಶ ಬಾಗಲಕೋಟೆ, ಡಾ. ಹೇಮಚಂದ್ರ ಶೆಟ್ಟಿ ಮಡಂತ್ಯಾರು, ಡಾ. ರವಿಭಟ್ ಅರಸಿಕೆರೆ, ಡಾ. ಹರ್ಷ ಬೆಂಗಳೂರು, ಡಾ. ಪಂಕಜ್ ಪಾಟೀಲ್ ಅಥಣಿ, ಡಾ. ಪ್ರದೀಪ್ ಕಾಸರಗೋಡು, ಡಾ. ಪ್ರಜ್ವಲ್ ಕುಮಾರ್ ಚಿತ್ರದುರ್ಗ, ಡಾ. ಸಹನ ಶಂಕರಿ ಕುಕ್ಕರಬೆಟ್ಟ, ಡಾ.ಶೃತಿ ಆರ್. ಶರ್ಮ ಬೆಂಗಳೂರು, ಡಾ.ದೀಪಕ್ ಬೆಂಗಳೂರು ಹಾಜರಿದ್ದರು.