ಗ್ರಾಮಾಭಿವೃದ್ಧಿಗೆ ಜನರ ಸಹಕಾರ ಅಗತ್ಯ
ಹೊಸನಗರ: ಗ್ರಾಮದ ಅಭಿವೃದ್ಧಿಗೆ ಜನರ ಕಾಳಜಿ ಮತ್ತು ಸಹಕಾರ ಅಗತ್ಯ ಎಂದು ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಎಚ್.ವೈ. ಸತೀಶಗೌಡ ಹೇಳಿದರು.
ತಾಲೂಕಿನ ಹೆಂಡಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಯೊಂದಿಗೆ ಜನತೆ ಪೂರಕವಾಗಿ ಕಾರ್ಯ ನಿರ್ವಹಿಸಿದಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತವೆ ಎಂದರು.
ಸರ್ಕಾರದ ಯೋಜನೆಗಳು ಮತ್ತು ಉದ್ಯೋಗಖಾತ್ರಿ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳುವುದರ ಮೂಲಕ ಜನಸಾಮಾನ್ಯರು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.
ಕಂಪ್ಯೂಟರ್ ಅಳವಡಿಕೆ: ಒಂದನೇ ತರಗತಿಯಿಂದಲೆ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಬೇಕು ಎಂಬ ಮುಖ್ಯ ಶಿಕ್ಷಕ ಅರವಿಂದ ಕಾಳಜಿಯಿಂದಾಗಿ ಗ್ರಾಮಸ್ಥರ ಸಹಕಾರದಿಂದ ಸುಮಾರು ರು. 35ಸಾವಿರ ವೆಚ್ಚದಲ್ಲಿ ಹೆಂಡೆಗದ್ದೆ ಶಾಲೆಗೆ ಕಂಪ್ಯೂಟರ್ ಅಳವಡಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಮತ್ತು ಶಿಕ್ಷಕ ಶೇಷಾದ್ರಿ, ಗ್ರಾಪಂಯಲ್ಲಿ ಮೂರು ಬಾರಿ ಗೆದ್ದು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸತೀಶಗೌಡರನ್ನು ಅಭಿನಂಧಿಸಿದರು.
ಗ್ರಾಪಂ ಸದಸ್ಯರಾದ ನಾಗೇಶ ದುಬಾರತಟ್ಟಿ, ಸರೋಜ ಸತೀಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್, ಮುಖ್ಯ ಶಿಕ್ಷಕ ಅರವಿಂದ್ ಉಪಸ್ಥಿತರಿದ್ದರು.
ನಂತರ ವಿದುಷಿ ಅರುಂಧತಿ ಪಿ.ವಿ. ಭಟ್ ತಂಡ ವಿವಿಧ ಪ್ರಾಕಾರದ ನೃತ್ಯ ವೈಭವವನ್ನು ಪ್ರದರ್ಶಿಸಿ ಮೆಚ್ಚುಗೆಗಳಿಸಿತು.