ನಾಳೆ ಪಿನೋಕಿಯೋ ನಾಟಕ
ಶಿವಮೊಗ್ಗ: ಕಳೆದ ಆಗಸ್ಟ್ 31ರಂದು ನಗರದಲ್ಲಿ ಪ್ರದರ್ಶನ ಕಂಡ ಪಿನೋಕಿಯೋ ಯಶಸ್ವೀ ನಾಟಕದ ಇನ್ನೊಂದು ಪ್ರದರ್ಶನವನ್ನು ನಗರಗದ ಕುವೆಂಪು ರಂಗಮಂದಿರದಲ್ಲಿ ಸೆ.16ರ ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.ಮಕ್ಕಳಿಗೆ 10 ಹಾಗೂ ದೊಡ್ಡವರಿಗೆ 20 ಪ್ರವೇಶದರವಿರುತ್ತದೆ. ನಾಟಕಾಭಿಮಾನಿಗಳ ಅಪೇಕ್ಷೆಯ ಮೇರೆಗೆ ಮತ್ತೊಂದು ಪ್ರದರ್ಶನ ಕಾಣುತ್ತಿರುವ ಈ ನಾಟಕದ ಮೂಲ ಕಥೆ ಇಟಲಿಯ ಕಾರ್ಲೋ ಕಲಾಡಿ ಅವರದಾಗಿದ್ದು, ರಂಗರೂಪಕ್ಕೆ ತಂದಿರುವವರು ಪತ್ರಕರ್ತ ಶ್ರೀನಿವಾಸನ್. 35ಕ್ಕೂ ಹೆಚ್ಚು ಮಕ್ಕಳು ಹಾಗೂ ಅಷ್ಟೇ ಸಂಖ್ಯೆಯ ನೇಪಥ್ಯದ ಕಲಾವಿದರು ಒಗ್ಗೂಡಿ ಪ್ರದರ್ಶಿಸಲಿರುವ ನಾಟಕದ ನಿರ್ದೇಶಕರು ರೇಣುಕಪ್ಪ. ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಬೇಕಾಗಿ ಆಯೋಜಕ ತಂಡ ಕಲಾಕಿರಣ ಕೋರಿದೆ.
ಸರ್ವ ಸದಸ್ಯರ ಸಭೆ
ಶಿವಮೊಗ್ಗ: ಶ್ರೀ ಆದಿ ಶಂಕರಾಚಾರ್ಯ ಲೇಜೌಟ್ ನಿವೇಶನ ಮಾಲೀಕರ ಸಂಘ ಸೆ.15ರಂದು ಬೆಳಿಗ್ಗೆ 10.30ಕ್ಕೆ ಆಲ್ಕೊಳ ನಿವೇಶನದಲ್ಲಿ ಸರ್ವ ಸದಸ್ಯರ ಸಭೆ ಹಾಗೂ ಮುಂದಿನ ಅವಧಿಯ ಕಾರ್ಯ ಸಮಿತಿ ರಚನೆ ಕುರಿತು ವಾರ್ಷಿಕ ಸಭೆಯನ್ನು ಏರ್ಪಡಿಸಿದೆ. ನಿವೇಶನದ ಎಲ್ಲಾ ಮಾಲೀಕರುಗಳು ತಮ್ಮ ಕುಟುಂಬ ಸಮೇತ ಸಭೆಯಲ್ಲಿ ಪಾಲ್ಗೊಳ್ಳಲು ಸಂಘದ ಅಧ್ಯಕ್ಷ, ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ- 9483100656.
ಮೂಳೆ ಪರೀಕ್ಷೆ
ಶಿವಮೊಗ್ಗ: ನಗರದ ಜಗನ್ನಾಥ ನರ್ಸಿಂಗ್ ಹೋಂನ ಡೆಕ್ಸಾ ಸ್ಕಾನಿಂಗ್ ಸೆಂಟರ್ನಲ್ಲಿ ಸೆ.15ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಡೆಕ್ಸಾ ಯಂತ್ರದಿಂದ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೊಂಟ, ಭುಜ, ಕುತ್ತಿಗೆ ಅಥವಾ ಬೆನ್ನು ನೋವಿನ ತೊಂದರೆಗೆ ಒಳಗಾಗಿರುವವರು, 40 ವರ್ಷ ಮೇಲ್ಟಟ್ಟ ಪುರುಷರು, ಋತು ಸ್ರಾವ ನಿಂತಿರುವ ಎಲ್ಲಾ ಮಹಿಳೆಯರು, ಗರ್ಭಕೋಶ, ಚಿಕಿತ್ಸೆಗೆ ಒಳಗಾಗಿರುವವರು, ಸಕ್ಕರೆ ಖಾಯಿಲೆ, ರಕ್ತದ ಒತ್ತಡ, ಅರ್ಥೈಟಿಸ್, ಸ್ತೂಲ ಕಾಯ ಮತ್ತಿತರ ರೋಗಗಳಿಂದ ನರಳುತ್ತಿರುವವರು ಚಿಕಿತ್ಸೆಗೆ ಒಳಗಾಗಬಹುದು ಎಂದು ಸೆಂಟರ್ನ ಎ.ಆರ್. ಜಯಪ್ರಕಾಶ್ ತಿಳಿಸಿದ್ದಾರೆ. ವಿವರಗಳಿಗಾಗಿ- 9448149872.
ಕಟ್ಟಡ ಉದ್ಘಾಟನೆ
ಶಿವಮೊಗ್ಗ: ಕಾಶಿಪುರದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡಕ್ಕೆ ಆರ್.ಕೆ. ಫ್ಯಾಷನ್ಸ್ ಸಿದ್ದ ಉಡುಪ ತಯಾರಿಕಾ ಘಟಕ ಸ್ಥಳಾಂತರಗೊಳ್ಳಲಿದ್ದು, ಸೆ.15ರಂದು ಬೆಳಿಗ್ಗೆ 10.30ಕ್ಕೆ ಕಟ್ಟಡದ ಉದ್ಘಾಟನೆಯನ್ನು ಕಾರ್ಮಿಕರೇ ನೆರವೇರಿಸುವರು. ಮುಖ್ಯಅತಿಥಿಯಾಗಿ ಶ್ರೀಕಂಠಕೂಡಿಗೆ, ಪ್ರಗತಿಪರ ಹೋರಾಟಗಾರ ಕೆ.ಎಲ್. ಅಶೋಕ್ ಮತ್ತು ಹಂಸಮ್ಮನವರು ಭಾಗವಹಿಸುವರು.
ಎಂಜಿನಿಯರ್ಸ್ ಡೇ
ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸೆ.15ರಂದು ಬೆಳಿಗ್ಗೆ 10.30ಕ್ಕೆ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಸರ್ ಎಂ.ವಿ. ವಿಶ್ವೇಶ್ವರಯ್ಯ ಅವರು ಜನ್ಮ ದಿನದ ಅಂಗವಾಗಿ ಎಂಜಿನಿಯರ್ಸ್ ಡೇ ಹಮ್ಮಿಕೊಂಡಿದೆ. ಕುವೆಂಪು ವಿಶ್ವವಿದ್ಯಾನಿಲಯದ ಪ್ರಸಾಂಗ ನಿರ್ದೇಶಕ ಡಾ. ಪ್ರಶಾಂತ್ ನಾಯಕ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಅಧ್ಯಕ್ಷ ಮಹೇಂದ್ರಪ್ಪ ಉಪಸ್ಥಿತರಿರುವರು.
ಕೈಗಾರಿಕಾ ಕ್ಷೇತ್ರಲ್ಲಿ ಗಣನೀಯವಾಗಿ ಸಾಧನೆಗೈದ ವಾಸವಿ ಟೆಕ್ನೋಕ್ಯಾಸ್ಟ್ ಪ್ರೈವೇಟ್ ಲಿ, ಪಾರ್ವತಿ ಪ್ಯಾಟರ್ನ್ಸ್ ಮತ್ತು ಸಂಜೀವಿನಿ ಆರ್ಗ್ಯಾನಿಕ್ ಮನ್ಯೂರ್ ಮತ್ತು ಮಿನರಲ್ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಇತರೆ ಎಲ್ಲಾ ಸಂಸ್ಥೆಗಳ ನಿರ್ದೇಶಕರು ಹಾಗೂ ಎಲ್ಲಾ ಪಾಲುದಾರರನ್ನು ಅಭಿನಂದಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಪಿ. ರುದ್ರೇಶ್ ತಿಳಿಸಿದ್ದಾರೆ.
ದೆಹಲಿ ಅತ್ಯಾಚಾರಿಗಳಿಗೆ ಗಲ್ಲು: ಜೆಡಿಎಸ್ ಸ್ವಾಗತ
ಸಾಗರ: ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಆರೋಪಿಗಳಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ನೀಡಿರುವುದನ್ನು ಜೆಡಿ(ಎಸ್) ಮಹಿಳಾ ಘಟಕ ಸ್ವಾಗತಿಸಿದೆ.
ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಳನ್ನು ಅತಿ ಶೀಘ್ರದಲ್ಲಿ ಬಂಧಿಸುವ ಮೂಲಕ ತಮ್ಮ ತನಿಖಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ನ್ಯಾಯವಾದಿಗಳು ಆರೋಪಿಗಳ ವಿರುದ್ಧ ಸಮರ್ಥವಾಗಿ ವಾದ ಮಂಡಿಸಿರುವುದು ಹಾಗೂ ನ್ಯಾಯಾಧೀಶರು ಆರೋಪಿಗಳು ಮಾಡಿರುವ ದುಷ್ಕೃತ್ಯಕ್ಕೆ ತಕ್ಕ ದಂಡನೆ ವಿಧಿಸಿರುವುದಕ್ಕೆ ಜೆಡಿ(ಎಸ್) ಕೃತಜ್ಞತೆ ಸಲ್ಲಿಸುತ್ತದೆ.ಕೇಂದ್ರ ಸರ್ಕಾರ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರು ನಿರ್ಭಯವಾಗಿ ತಿರುವಂತಹ ವಾತಾವರಣ ನಿರ್ಮಾಣ ಮಾಡುವಲ್ಲಿ ಇಂತಹ ಕಾನೂನು ಬಳಕೆ ಕಡ್ಡಾಯವಾಗಬೇಕು ಎಂದು ಜಿಲ್ಲಾ ಉಪಾಧ್ಯಕ್ಷೆ ಜಯಲಕ್ಷ್ಮೀ ನಾರಾಯಣಪ್ಪ, ತಾಲೂಕು ಘಟಕದ ಅಧ್ಯಕ್ಷೆ ಮಾದೇವಿ ಪುರುಷೋತ್ತಮ, ನಗರ ಘಟಕದ ಅಧ್ಯಕ್ಷೆ ಲಲಿತಾ ಭೀಮಾಶೆಟ್ಟಿ ಹಾಗೂ ಯುವ ಘಟಕದ ಅಧ್ಯಕ್ಷೆ ಕುಸುಮಾ ಒತ್ತಾಯಿಸಿದ್ದಾರೆ.
ಕುರಿ ಕಳ್ಳನ ಹಿಡಿದ ಸಾರ್ವಜನಿಕರು
ಶಿರಾಳಕೊಪ್ಪ: ಪಟ್ಟಣದಲ್ಲಿ ಓಡಾಡುತ್ತಿದ್ದ ಕುರಿಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಕುರಿ ಸಹಿತ ಸಾರ್ವಜನಿಕರೇ ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ನಡೆದಿದೆ. ಬಸ್ ನಿಲ್ದಾಣದ ಬಳಿ ಮೇಯುತ್ತಿದ್ದ ಕುರಿಯನ್ನು ಕದಿಯುತ್ತಿದ್ದ ಭದ್ರಾವತಿಯ ಗಣೇಶ್ ಎಂಬ ವ್ಯಕ್ತಿಯನ್ನು ಸಂಶಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಿಡಿದು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಶ್ನಿಸಿದಾಗ ಆತ ಭದ್ರಾವತಿಯ ನಿವಾಸಿ ಎಂದು ತಿಳಿದಿದೆ. ನಂತರ ಪೊಲೀಸರು ದೂರುದಾಖಲಿಸಿ ಕೋರ್ಟಿಗೆ ಹಾಜರು ಪಡಿಸಿ ಜೈಲಿಗೆ ಕಳಿಸಿದ್ದಾರೆ.
ಜನಸಂಪರ್ಕ ಸಭೆ
ಶಿವಮೊಗ್ಗ: ಮೆಸ್ಕಾಂ ಶಿವಮೊಗ್ಗ ವೃತ್ತ ವ್ಯಾಪ್ತಿಯ ನಗರ ಉಪ ವಿಭಾಗ-2, ಕೃಷಿಕ ಸಮಾಜ ಕಟ್ಟಡ, ಓ.ಟಿ. ರಸ್ತೆ ವಿಳಾಸದಲ್ಲಿ ಸೆ.16ರ ಬೆಳಿಗ್ಗೆ 10.30ರಿಂದ 12 ಗಂಟೆ ವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಸಂಬಂಧಪಟ್ಟ ಪ್ರದೇಶಗಳಾದ ಘಟಕ-4, ಕೆ.ಆರ್. ಪುರಂ ಕಚೇರಿ, ಘಟಕ-5, ಭಾರತೀಯ ಸಭಾ ಭವನದ ಹತ್ತಿರ, ಆರ್.ಎಂ.ಎಲ್.ನಗರ, 2ನೇ ಹಂತ ಕಚೇರಿ ಮತ್ತು ಘಟಕ-6, ಗುತ್ಯಪ್ಪ ಕಾಲೋನಿ ಮ.ವಿ.ಸ.ಕಂ., ಕಚೇರಿಗಳ ವ್ಯಾಪ್ತಿಯ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ. ಗ್ರಾಹಕರು ಕುಂದು ಕೊರತೆಗಳು ಇದ್ದಲ್ಲಿ ಲಿಖಿತವಾಗಿ ಅಥವಾ ಖುದ್ದಾಗಿ ಭೇಟಿಯಾಗಿ ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಬಿಡುಗಡೆ
ಶಿವಮೊಗ್ಗ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೆಪ್ಟೆಂಬರ್ ಮಾಹೆಗೆ ಶಿವಮೊಗ್ಗ ತಾಲೂಕಿನ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 30 ರೊಳಗಾಗಿ ಫಲಾನುಭವಿಗಳು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಯಿಂದ ಆಹಾರಧಾನ್ಯ ಹಾಗೂ ಸೀಮೆಎಣ್ಣೆಯನ್ನು ಪಡೆಯುವಂತೆ ಶಿವಮೊಗ್ಗ ತಾಲೂಕಿನ ತಹಸೀಲ್ದಾರ್ ತಿಳಿಸಿದ್ದಾರೆ.
ಆದಾಯಮಿತಿ ಹೆಚ್ಚಳ
ಶಿವಮೊಗ್ಗ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಕಾನೂನು ಪದವಿಯಲ್ಲಿ ಉತ್ತೀರ್ಣರಾದ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಪ್ರಸಕ್ತ ಸಾಲಿನ ತರಬೇತಿಗಾಗಿ ಅರ್ಜಿ ಅಹ್ವಾನಿಸಲಾಗಿತ್ತು. ತರಬೇತಿ ಪಡೆಯಲಿಚ್ಚಿಸುವ ಪ್ರವರ್ಗ 2ಎ, 3ಎ ಮತ್ತು 3ಬಿ ಅಭ್ಯರ್ಥಿಗಳ ಪೋಷಕರು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ವಾರ್ಷಿಕ ವರಮಾನವನ್ನು 15,000 ರು.ಗಳಿಂದ 2.50 ಲಕ್ಷ ರು. ಮಿತಿಗೆ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 3.50 ಲಕ್ಷ ರು.ಗಳಿಗೆ ಆದಾಯದ ಮಿತಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.