ಪ್ರತಿಯೊಬ್ಬರು ಶಿಕ್ಷಣದ ಕಡೆ ಗಮನ ಹರಿಸಿ
ಶಿವಮೊಗ್ಗ: ಇದು ಸ್ಫರ್ಧಾತ್ಮಕ ಯುಗ. ಇಲ್ಲಿ ಶಿಕ್ಷಣ ಅತೀ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಪ್ರತಿಯೊಬ್ಬರು ಶಿಕ್ಷಣದ ಕಡೆ ಗಮನ ಹರಿಸಿ ಸಾಕ್ಷರರಾಗಬೇಕು ಎಂದು ಜಿಪಂ ಅಧ್ಯಕ್ಷೆ ಗೀತಾಮಲ್ಲಿಕಾರ್ಜುನ ಕರೆ ನೀಡಿದರು.
ಜನಶಿಕ್ಷಣ ಸಂಸ್ಥೆ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಶ್ರಯದಲ್ಲಿ ಜನಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ಅಂತರ ರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಾಹಿತಿ ಸಪ್ತಾಹ ಹಾಗೂ ವಿವಿಧ ವೃತ್ತಿಕೌಶಲ್ಯ ತರಬೇತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚು ಮಾಡಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು. ಅದೇ ರೀತಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಾಕ್ಷರತೆಯನ್ನು ಹೆಚ್ಚಿಸಲು ಶ್ರಮವಹಿಸಬೇಕು ಎಂದರು. ಸಂವಿಧಾನದಲ್ಲಿ ಶಿಕ್ಷಣ ಹಕ್ಕನ್ನು ರೂಪಿಸಲಾಗಿದೆ.
ಹಾಗಾಗಿ ಸರ್ಕಾರ ದೇಶದಲ್ಲಿ ಸಾಕ್ಷರತಾ ಪ್ರಮಾಣ ಅಧಿಕ ಮಾಡಲು ವಯಸ್ಕರ ಶಿಕ್ಷಣ, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ನೀಡುವುದು. ಸಂಜೆ ಶಾಲೆ, ಕಾಲೇಜುಗಳ ಆರಂಭ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದ್ದರಿಂದ ಸಾಕ್ಷರತೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ.
ಹಿಂದೆ ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಬಹಳ ಕಡಿಮೆ ಇತ್ತು. ಆದರೆ, ಇಂದು ಗಣನೀಯ ಪ್ರಮಾಣದಲ್ಲಿ ಅಧಿಕವಾಗಿದೆ. ಜಿಲ್ಲೆಯಲ್ಲಿಯೂ ಕೂಡ ಸಾಕ್ಷರತಾ ಪ್ರಮಾಣ ಏರಿಕೆಯಾಗುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ದಶಕಗಳ ಹಿಂದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬುದು ಮರೀಚಿಕೆಯಾಗಿತ್ತು. ನಾಲ್ಕು ಗೋಡೆ ಮಧ್ಯೆಯೇ ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿತ್ತು. ಅಡುಗೆ ಮನೆ, ಮಕ್ಕಳ ಪಾಲನೆ-ಲಾಲನೆ ಮಾಡಲು ಮಾತ್ರ ಸೀಮಿತವಾಗಿದ್ದರು.
ಆದರೆ, ಇಂದು ಕಾಲ ಬದಲಾಗಿದೆ. ಹೆಣ್ಣು ಮಕ್ಕಳಿಗೂ ಶಿಕ್ಷಣ ಕಡ್ಡಾಯಗೊಳಿಸಿದ್ದು, ಇದರಿಂದಾಗಿ ಅವರಿಗೂ ಶಿಕ್ಷಣ ದೊರಕಿದಂತಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಎಂದರು. ಇಂದು ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಿಕ್ಷಣದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೆಚ್ಚು ಅಂಕಗಳಿಸುತ್ತಿದ್ದಾರೆ. ಪುರುಷರ ಸರಿಸಮನಾಗಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಪುರುಷನ ಸಮಾನವಾಗಿ ವೃತ್ತಿ ಬದುಕನ್ನು ಸಾಗಿಸುತ್ತಿದ್ದಾರೆ. ಒಂದು ಹೆಣ್ಣು ಶಿಕ್ಷಣ ಕಲಿತರೆ ಅಲ್ಲಿ ಶಾಲೆಯೇ ತೆರೆದಂತೆ ಎಂದು ಅಭಿಪ್ರಾಯಪಟ್ಟರು.
ಜನಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಎಸ್.ವೈ. ಅರುಣಾದೇವಿ, ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸಸಿಕಾಂತ್ ಸೆಂಥಿಲ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯಿತ್ರಿ ಷಣ್ಮುಖಪ್ಪ, ಜೆ.ಎಸ್.ಎಸ್. ಸಹಕಾರ್ಯಕ್ರಮಾಧಿಕಾರಿ ಕವಿತಾ ಮತ್ತಿತರರು ಇದ್ದರು.