ರಕ್ತದಾನದಿಂದ ಆರೋಗ್ಯ ವೃದ್ಧಿ
ಶಿವಮೊಗ್ಗ: ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ದೇಶೀಯ ವಿದ್ಯಾಶಾಲಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಮತ್ತು ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಅವರು, ರಕ್ತದಾನ ಮಾಡಿದರೆ ಆರೋಗ್ಯ ಹಾಳಾಗುತ್ತದೆ ಎಂಬ ತಪ್ಪು ಗ್ರಹಿಕೆ ಸಾರ್ವಜನಿಕರಲ್ಲಿದೆ. ಆದರೆ. ರಕ್ತದಾನ ಮಾಡುವುದರಿಂದ ಯಾವುದೇ ಕಾರಣಕ್ಕೂ ಆರೋಗ್ಯ ಹಾಳಾಗುವುದಿಲ್ಲ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೇ ರಕ್ತವು ಹೆಚ್ಚಾಗುತ್ತದೆ ಎಂದರು.
ಯುವಕರಲ್ಲಿಯೂ ರಕ್ತದಾನ ಮಾಡುವುದರಿಂದ ಆರೋಗ್ಯ ಹದಗೆಟ್ಟುತ್ತದೆ ಎಂಬ ಭಾವನೆ ತುಂಬಿದೆ. ಇದು ಮೊದಲು ಕಡಿಮೆಯಾಗಬೇಕು ಎಂದ ಅವರು, ನಾವು ದಾನ ಮಾಡುವ ರಕ್ತ ಒಬ್ಬ ವ್ಯಕ್ತಿಯ ಜೀವ ಉಳಿಸುತ್ತದೆ ಎಂಬುದನ್ನು ಯುವಕರು ತಿಳಿದುಕೊಳ್ಳಬೇಕು ಎಂದರು.
ಮುಖ್ಯವಾಗಿ ಎ, ಬಿ, ಓ ಗುಂಪಿನ ರಕ್ತ ದೊರಕುವುದು ತೀರಾ ಅಪರೂಪ. ಈ ರಕ್ತದ ಗುಂಪು ಹೊಂದಿದವರು ಅಪಾಯದಲ್ಲಿದ್ದಾಗ ಸೂಕ್ತ ಸಮಯದಲ್ಲಿ ರಕ್ತ ದೊರಕದೆ ಸಾವನ್ನಪ್ಪುವ ಸಂದರ್ಭವೇ ಹೆಚ್ಚು. ಹಾಗಾಗಿ ಈ ರಕ್ತದ ಗುಂಪು ಹೊಂದಿದವರು ರಕ್ತದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹೆಣ್ಣು-ಗಂಡು ಬೇಧವಿಲ್ಲದೆ, ಆರೋಗ್ಯವಂತ ವ್ಯಕ್ತಿ ನಿಯಮಿತವಾಗಿ ರಕ್ತದಾನ ಮಾಡಿದಲ್ಲಿ, ಆ ವ್ಯಕ್ತಿಯ ಆರೋಗ್ಯ ಇನ್ನಷ್ಟು ವೃದ್ಧಿಸುತ್ತದೆ ಎಂದರಲ್ಲದೇ, ರಕ್ತವನ್ನು ಯಾವ ಕಾಲದಲ್ಲಿಯಾದರೂ ನೀಡಬಹುದು. ಯುವಕರು, ವಿದ್ಯಾರ್ಥಿಗಳು ರಕ್ತದಾನದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಮಾಜಿಕ ಕಳಕಳಿ ಮೆರೆಯಬೇಕು ಎಂದರು.
ಯುವಜನತೆ ಪದವೀಧರರಾಗಿ ಹೊರಗೆ ಬರುತ್ತಿರುವ ಸಂದರ್ಭದಲ್ಲಿ ಸಮಾಜದ ಕಡೆಗೆ ಗಮನ ಹರಿಸಬೇಕು. ದೇಶದಲ್ಲಿ ಯುವಕರಿಗೆ ಎಲ್ಲಾ ರಂಗದಲ್ಲಿಯೂ ಹೆಚ್ಚಿನ ಅವಕಾಶಗಳು ಇದ್ದು, ಸರ್ಕಾರದಿಂದಲೂ ಅನೇಕ ಸೌಸಭ್ಯಗಳು ಲಭ್ಯವಿದೆ. ಅದನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಹಿಮಂತರಾಜು, ರಕ್ತನಿಧಿ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಂ. ಸಂಜಯ್, ಕಾಲೇಜಿನ ಪ್ರಾಂಶುಪಾಲ ಹಾಗೂ ಎನ್‌ಎಸ್‌ಎಸ್ ಅಧಿಕಾರಿ ಎ.ಟಿ. ಪದ್ಮೇಗೌಡ ಮತ್ತಿತರರು ಇದ್ದರು.