ವಿವೇಕಾನಂದರ ಜೀವನ ಚರಿತ್ರೆ ಅರಿಯಿರಿ: ರುಕ್ಮಿಣಿ
ಶಿವಮೊಗ್ಗ: ವಿವೇಕಾನಂದರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದರೊಂದಿಗೆ ಅವರ ಆದರ್ಶ, ದೇಶಪ್ರೇಮ, ಸ್ವಾಭಿಮಾನವನ್ನು ಮೈಗೊಡಿಸಿಕೊಳ್ಳಬೇಕು ಎಂದು ಅಧ್ಯಾಪಕಿ ರುಕ್ಮಿಣಿನಾಯಕ್ ತಿಳಿಸಿದರು.
ನಗರದ ಎಟಿಎನ್ಸಿಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಶನಿವಾರ ಸಂವರ್ಧಿನಿ ಸಂಸ್ಥೆ ವಿವೇಕಾನಂದ 150 ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವೇಕಾನಂದರ ಕುರಿತಾದ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿದ ಅವರು, ವಿವೇಕಾನಂದರ ಜೀವನ ಚರಿತ್ರೆಯ ಜ್ಯೋತಿಗೆ ವಿದ್ಯಾರ್ಥಿಗಳು ಅಧ್ಯಯನ ಎಂಬ ತೈಲ ಹಾಕಿ ಅದು ದೀಪದಂತೆ ಸದಾ ಪ್ರಜ್ವಲಿಸುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿವೇಕಾನಂದರ ಜೀವನ ಕುರಿತಾದ ಪ್ರಬಂಧ ಸ್ಪರ್ಧೆಗೆ ಈಗಾಗಲೆ ಪೂರ್ವಭಾವಿಯಾಗಿ ಸಿದ್ದಗೊಂಡಿದ್ದಿರಿ. ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವ, ಆದರ್ಶಗಳನ್ನು ತಿಳಿದಿದ್ದೀರಿ.
ಅದನ್ನೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು. ಜೀವನದಲ್ಲಿ ಬದಲಾವಣೆಯ ಗಾಳಿ ಬೀಸಲು ವಿವೇಕಾನಂದರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಜೇಂದ್ರ ಸೂಲೀಕೆರೆ, ರಂಜನಿ ದತ್ತಾತ್ರಿ, ವಾರೀಜ, ಜಗದೀಶ್, ಸುರೇಖಾ, ಮುರಳೀಧರ್, ಮಹೇಶ್ವರಪ್ಪ ಮತ್ತಿತರರು ಇದ್ದರು.