ಸೂಕ್ಷ್ಮತೆ ಕಳೆದುಕೊಳ್ಳುತ್ತಿರುವ ಕನ್ನಡ
ಶಿವಮೊಗ್ಗ: ಕನ್ನಡ ಭಾಷೆ ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದು, ಕೀಳು ಅಭಿರುಚಿಯನ್ನು ಹೊಂದುತ್ತಿದೆ ಎಂದು ಸಾಗರದ ವಿಶ್ರಾಂತ ಪ್ರಾಂಶುಪಾಲ ಬಿ.ಆರ್. ವಿಜಯವಾಮನ ವಿಷಾದಿಸಿದರು.
ಕರ್ನಾಟಕ ಸಂಘ ಶನಿವಾರ ಸಂಜೆ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಅಭಿರುಚಿ ವಿಷಯ ಕುರಿತು ಮಾತನಾಡಿ, ಸಮಾಜದಲ್ಲಿ ಕನ್ನಡ ಭಾಷೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾಷೆ ಅಧಃ ಪಥನವಾಗುತ್ತಿದಿಯೇನೋ ಎಂದೆನಿಸುತ್ತಿದೆ. ಭಾಷೆಯಲ್ಲಿ ಅಶ್ಲೀಲ ಪದಗಳ ಬಳಕೆ ಮಾಡುತ್ತಿರುವುದರಿಂದ ಭಾಷೆಯ ನವಿರು ಕಳೆದುಕೊಳ್ಳುತ್ತಿದೆ ಎಂದರು.
ಇಂದು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ, ಫೋನ್ಗಳಲ್ಲಿ ಬಳಸುತ್ತಿರುವ ಭಾಷೆಗಳು ಯಾವ ಹಂತಕ್ಕೆ ಹೋಗಿವೆ ಎಂದರೆ ಅದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ಎಲ್ಲವನ್ನು ತಡೆಗಟ್ಟಲು ಮುಂದಾಗುವ ಕಾನೂನುಗಳು ಅಶ್ಲೀಲ ಭಾಷೆಯನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಕನ್ನಡ ಭಾಷೆ ಸಾಹಿತ್ಯ, ಕಾದಂಬರಿಗಳಲ್ಲಿ ಮಾತ್ರ ಕನ್ನಡವನ್ನು ಕಾಣಬಹುದು ಅಷ್ಟೇ. ಆದರೆ, ನಿಜವಾಗಿ ಬಳಸುತ್ತಿರುವ ಕನ್ನಡವೇ ಬೇರೆಯಾಗಿದೆ ಎಂದರು.
ಕನ್ನಡ ಜಾಹೀರಾತುಗಳಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯಾಗುತ್ತಿದೆ ಎಂದರಲ್ಲದೇ, ಅಭಿರುಚಿ ಎನ್ನುವುದು ಒಂದು ವಿಮರ್ಶಾ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ, ಪ್ರೊ. ವೆಂಕಟೇಶ್, ಪ್ರೊ. ನಾಗಭೂಷಣ್ ಮತ್ತಿತರರು ಇದ್ದರು.