'ಹಿಂದಿ ಭಾಷೆ ರಕ್ಷಣೆಗೆ ಒಗ್ಗಟ್ಟಿನ ಕೊರತೆ'
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.14
ದೇಶದ ರಾಷ್ಟ್ರೀಯ ಭಾಷೆಯಾಗಿರುವ ಹಿಂದಿ ಭಾಷೆಯ ರಕ್ಷಣೆಗೆ ಒಗ್ಗಟ್ಟಿನ ಕೊರತೆ ಇದೆ ಎಂದು ಹಿಂದಿ ಸಾಹಿತ್ಯ ಆಕಾಡೆಮಿ ಪುರಸ್ಕೃತ, ವಿಶ್ರಾಂತ ಮುಖ್ಯೋಪಾಧ್ಯಾಯ ಡಿ.ಎನ್. ಶ್ರೀನಾಥ್ ವಿಷಾದ ವ್ಯಕ್ತಪಡಿಸಿದರು.
ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು ಶನಿವಾರ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದಿ ದಿವಸದ ಆಚರಣೆ ಕಾರ್ಯಕ್ರಮದಲ್ಲಿ ಅವರು, ದೇಶದ ರಾಜಕೀಯ ವ್ಯಕ್ತಿಗಳು ಭಾಷಾ ನೀತಿಗೆ ಸಂಬಂಧಿಸಿದಂತೆ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಇದ್ದರಿಂದ ಭಾಷೆಯ ಅಸ್ಥಿತ್ವಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಭಾಷೆ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಹಚ್ಚುವ ಕೆಲಸವನ್ನು ರಾಜಕೀಯ ಮುಖಂಡರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದಿ ಭಾಷೆ ಮಾತನಾಡಿ ಅದನ್ನು ಬೇರೆಯವರಲ್ಲೂ ಪ್ರೇರೇಪಿಸುವ ಕೆಲಸವಾಗಬೇಕು ಎಂದ ಅವರು, ಇಸ್ತ್ರೇಲಿನಲ್ಲಿ ಹೀಬ್ರೊ ಭಾಷೆ ಸಾಯುತ್ತಿರುವ ಸಂದರ್ಭದಲ್ಲಿ ದೇಶ ಪುನರ್ ನಿರ್ಮಾಣಗೊಂಡು ಕೆಲವೇ ತಿಂಗಳಲ್ಲಿ ಹೀಬ್ರೊ ಭಾಷೆಯನ್ನು ಪ್ರಸಿದ್ದಿಗೊಳಿಸಬೇಕು ಎಂದು ದೇಶ ಸಂಕಲ್ಪಿಸಿತ್ತು. ಈ ಸಂಬಂಧವಾಗಿ ಭಾಷೆ ಬೆಳೆದು ಅಭಿವೃದ್ಧಿ ಹೊಂದಿ ಕೇವಲ ಆರು ತಿಂಗಳೊಳಗೆ ಆ ಭಾಷೆಯ ಕೃತಿಯೊಂದಕ್ಕೆ ನೊಬೆಲ್ ಪ್ರಶಸ್ತಿ ದೊರಕಿತು ಎಂದು ತಿಳಿಸಿದರು.
ಈಗ ಹಿಂದಿ ಭಾಷೆಯನ್ನು ಜಾಗತಿಕ ಭಾಷೆಯನ್ನಾಗಿಸಬೇಕೆಂದು ನಿರ್ಣಯಿಸಲಾಗಿದೆ. ಹಿಂದಿಯನ್ನು ರೋಮನ್ ಭಾಷೆಯಲ್ಲಿ ಬರೆಸಬೇಕು.
ಆ ಮೂಲಕ ಹಿಂದಿಗೆ ಒಂದು ದಿಕ್ಕು ತೋರಿಸಬೇಕು ಎಂದು ಅವರು, ಭಾಷೆ ಬಗ್ಗೆ ದ್ವೇಷಕಾರುವುದನ್ನು ಬಿಟ್ಟು ಆ ಭಾಷೆಯ ಮಹತ್ವ ಅರಿಯಬೇಕು. ಎಲ್ಲರೂ ಹಿಂದಿಯನ್ನು ತಮ್ಮ ನಿತ್ಯದ ಭಾಷೆಯನ್ನಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹಕಾರ್ಯದರ್ಶಿ ಎನ್.ಟಿ. ನಾರಾಯಣ್ ರಾವ್, ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ವಿಜಯಲಕ್ಷ್ಮೀ, ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಮತ್ತಿತರರು ಇದ್ದರು.