ಉತ್ತಮ ಸಮಾಜಕ್ಕಾಗಿ ಬಿಜೆಪಿ ಬೆಂಬಲಿಸಿ: ತನ್ವೀರ್
ಶಿವಮೊಗ್ಗ: ಭವಿಷ್ಯದಲ್ಲಿ ನಿಮ್ಮ ಮಕ್ಕಳು ಉತ್ತಮ ಶಿಕ್ಷಣವಂತರಾಗಬೇಕೆ, ಉತ್ತಮ ಉದ್ಯೋಗ ಗಳಿಸಬೇಕೆ ಹಾಗಿದ್ದರೆ ಬಿಜೆಪಿಗೆ ಮತ ಹಾಕಿ ದೇಶದಲ್ಲಿ ಬದಲಾವಣೆ ತರುವುದು ಅನಿವಾರ್ಯ. ಹೀಗೆಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮಾಜಿ ರಾಷ್ಟ್ರೀಯ ಅಧ್ಯಕ್ಷ ತನ್ವೀರ್ ಅಹ್ಮದ್ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದರು.
ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಬುಧವಾರ ನಡೆದ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ನ ವಿಭಜನಾತ್ಮಕ ಧೋರಣೆಯಿಂದ ದೇಶದ ಒಗ್ಗೂಡಿಕೆಗೆ ಆಪತ್ತು ಎದುರಾಗಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಆರ್ಥಿಕ, ಸಾಮಾಜಿಕ, ಶಿಕ್ಷಣ ಇವುಗಳಲ್ಲಿ ಸಮಾನವಾಗಿ ಮುಂದೆ ಹೋಗುತ್ತಿದ್ದಾರೆ ಎಂದರು.
ವಿಭಜನೆಯ ಯೋಚನೆಯ ಬದಲು ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುವಲ್ಲಿ ನರೇಂದ್ರ ಮೋದಿ ದೇಶಕ್ಕೆ ಅವಶ್ಯಕ ಎಂದು ಹೇಳಿದ ಅವರು, ಬಿಜೆಪಿ ಸರ್ಕಾರವಿರುವ ಗುಜರಾತ್, ಮಧ್ಯಪ್ರದೇಶ್, ಛತ್ತೀಸ್ಘಡ್, ರಾಜಸ್ಥಾನ, ಗೋವಾ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ನರೇಂದ್ರ ಮೋದಿ ಗುಜರಾತ್ನಲ್ಲಿ ಅಲ್ಪಸಂಖ್ಯಾತರನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಕೈಗಾರಿಕೆಗಳ ಸ್ಥಾಪನೆಯಿಂದ ಸಾಮಾನ್ಯ ಜನರಿಗೆ ಉದ್ಯೋಗ ದೊರೆತಿದೆ. ಇದರಿಂದ ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆ ಎಂದು ವಿವರಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಗುಜರಾತ್ ಗಲಭೆ ವಿಚಾರದಲ್ಲಿ ವಿನಾಕರಣ ಮೋದಿ ಅವರನ್ನು ಕಳಂಕರನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅಟಲ್ ಬಿಹಾರಿ ವಾಜಪೇಯಿ ಆಡಳಿತಾವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದರು. ಪ್ರಸ್ತುತ ದೇಶದಲ್ಲಿ ಭಯೋತ್ಪಾದಕರ ಕೃತ್ಯ ಅವ್ಯಾಹತವಾಗಿ ನಡೆಯುತ್ತಿದೆ. ಕಾಶ್ಮೀರದಲ್ಲಿ ಹಿಂದು-ಮುಸ್ಲಿಂ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಟೀಕಿಸಿದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಮುಸ್ಲಿಮರನ್ನು ಯಾರೂ ಗುತ್ತಿಗೆ ಪಡೆದಿಲ್ಲ. ಹಾಗೆಯೇ ಬಿಜೆಪಿ ಕೂಡ ಮುಸ್ಲಿಂ ವಿರೋಧಿಯಲ್ಲಿ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ವಿಧಾನ ಪರಿಷತ್ ಸದಸ್ಯ ಸಿದ್ದರಾಮಣ್ಣ, ಯೇಸುದಾಸ್, ಅಬೂಬಕ್ಕರ್, ಎಸ್. ದತ್ತಾತ್ರಿ, ರಿಯಾಜ್ ಭಾಷಾ ಮತ್ತಿತರರು ಇದ್ದರು.