ನ್ಯಾಯಯುತ ಸೇವೆ ಸಲ್ಲಿಸಲು ಬದ್ಧ: ಗೀತಾ
ಸೊರಬ: ಮಹಿಳೆ ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತಳಲ್ಲ. ಸಾಮಾಜಿಕ ಕ್ಷೇತ್ರದಲ್ಲೂ ಅಷ್ಟೇ ಸಮರ್ಥವಾಗಿ ಸೇವೆ ಸಲ್ಲಿಸಬಲ್ಲಳು ಎಂಬುದಕ್ಕೆ ಜಿಲ್ಲೆಯ ಐತಿಹಾಸಿಕ ಕೆಳದಿ ಚೆನ್ನಮ್ಮ, ಅಕ್ಕಮಹಾದೇವಿಯಂತಹ ಮಹಿಳೆಯರು ಹಲವು ಬದಲಾವಣೆ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾಗಿದ್ದೇ ಸಾಕ್ಷಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಹೇಳಿದರು. ಬುಧವಾರ ಉಳವಿ, ಶಿಗ್ಗಾ, ಮಾವಲಿ, ಉದ್ರಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಗೆ ನ್ಯಾಯ: ಸೊರಬ ತಾಲೂಕಿನ ರಾಜಕಾರಣ ಒಂದು ಕಾಲದಲ್ಲಿ ರಾಜ್ಯ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿತ್ತು. ಪ್ರಸ್ತುತ ಚುನಾವಣೆ ಫಲಿತಾಂಶ ದೇಶಕ್ಕೆ ದಿಕ್ಸೂಚಿಯಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಜೆಡಿಎಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ನನ್ನ ವಿಜಯದ ಫಲಿತಾಂಶ ಜಿಲ್ಲೆಯ ಸಮಸ್ತ ಮಹಿಳೆಯರ ಸಾಮಾಜಿಕ ಸ್ಥಾನಮಾನಗಳಿಗೆ ನ್ಯಾಯ ದೊರಕಿಸಿದಂತಾಗುತ್ತದೆ ಎಂದರು.
ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗೂ ಯಾವುದೇ ತಾರತಮ್ಯವಿಲ್ಲದೇ ಗೌರವ ಕಾಪಾಡಿಕೊಂಡು ಬಂದ ನಾನು, ಮತ ಕೊಟ್ಟ ಕ್ಷೇತ್ರ ಹಾಗೂ ಮತದಾರರಿಗೆ ಅಷ್ಟೇ ನ್ಯಾಯಯುತವಾಗಿ ಸೇವೆ ಸಲ್ಲಿಸಲು ಬದ್ಧ ಎಂದರು.
ಸಾಮಾಜಿಕ ನ್ಯಾಯ: ಬಂಗಾರಪ್ಪನವರು ಅಂದಿನ ರಾಜಕಾರಣದಲ್ಲಿ ಶೋಷಿತರಿಗೆ, ತುಳಿತಕ್ಕೆ ಒಳಗಾದವರಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಅಂತೆಯೇ ನನ್ನ ತಮ್ಮ ಮಧುಬಂಗಾರಪ್ಪ ಕೂಡ ಬಗರ್ ಹುಕುಂ ಹಕ್ಕು ಪತ್ರ ಕೊಡಿಸಲು ಹೋರಾಟ ನಡೆಸಿದ್ದಾರೆ. ಆದರೆ ಇದಕ್ಕೆ ಕೇಂದ್ರ ಸರ್ಕಾರದಿಂದ ಕಾನೂನು ತಿದ್ದುಪಡಿ ತರುವ ಅವಶ್ಯಕತೆ ಇದ್ದು, ತಾವು ಸಂಸದರಾಗಿ ಆಯ್ಕೆಯಾದ ಬಳಿಕೆ ತಿದ್ದುಪಡಿಗೆ ಒತ್ತಾಯಿಸುವುದಾಗಿ ತಿಳಿಸಿದರು.
ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ತಾಪಂ ಅಧ್ಯಕ್ಷ ಬಸವಲಿಂಗಪ್ಪ, ಉಪಾಧ್ಯಕ್ಷೆ ನೀಲಮ್ಮ ಸುರೇಶ್, ಸದಸ್ಯ ಬರಗಿ ನಿಂಗಪ್ಪ, ರಾಜೇಶ್ವರಿ ರಾಜಪ್ಪ, ಪಪಂ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ಲತಾ ಹೇಮಪ್ಪ, ಶೇಖರಮ್ಮ, ಪುಟರಾಜ ಗೌಡ, ಸುರೇಶ್, ಎಂ.ಡಿ. ಶೇಖರಪ್ಪ, ಶಿವಾನಂದಪ್ಪ, ಸುರೇಂದ್ರಪ್ಪ, ಲೀಲಾವತಿ, ಕುಸುಮಾ, ಬಸವೇಶ್ವರ, ಮಾಕೊಪ್ಪ ಪಕ್ಕೀರಪ್ಪ, ಮತ್ತಿತರರು ಇದ್ದರು.
--