ಇಂತಹ ಭ್ರಷ್ಟರನ್ನು ಯಾವ ಕಾಲದಲ್ಲೂ ನೋಡಿಲ್ಲ
ಕ.ಪ್ರ.ವಾರ್ತೆ ಶಿವಮೊಗ್ಗ ಏ.3
ಇಂತಹ ಭ್ರಷ್ಟರನ್ನು ನಾನು ಯಾವ ಕಾಲದಲ್ಲೂ ನೋಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಯಡಿಯೂರಪ್ಪರನ್ನು ತೀವ್ರವಾಗಿ ಟೀಕಿಸಿದರು.
ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರಕ್ಕೆ ಭೇಟಿ ನೀಡಿದಲ್ಲದೇ ಯಡಿಯೂರಪ್ಪ ಅವರನ್ನು ಬಹಿರಂಗವಾಗಿ ಹಲವು ವಿಷಯ ಪ್ರಸ್ತಾಪಿಸಿ ತೀವ್ರ ಟೀಕೆ ಮಾಡಿದರು.
ಅಭಿವೃದ್ಧಿ ನೋಡಲು ಬಂದೆ: ಗುರುವಾರ ಪಟ್ಟಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು, ಈ ಹಿಂದೆ ನಾನು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೈಪೋಟಿ ಮೇಲೆ ಆಸ್ತಿ ಖರೀದಿ ಮಾಡಿದ್ದೀರಿ ಎಂದು ಟೀಕಿಸಿದ್ದೆ. ಆಗ ಯಡಿಯೂರಪ್ಪ ಅವರು ಬೆದರಿಕೆ ಹಾಕಿದ್ರು.
ಸಿಂಗುಲರ್ (ಏಕವಚನ) ಆಗಿ ಮಾತಾಡಿದ್ರಿ. ಸತ್ಯ ಹೇಳಿದ್ರೆ ಕೋಪ ಬರುತ್ತೆ. ಹಾಗೆಯೇ ಆಗಿತ್ತು ಎಂದು ನೆನಪಿಸಿಕೊಂಡ ಅವರು, ಮೈಸೂರು ಕಡೆ ಬಂದಾಗ ಹೇಗೆ ಅಭಿವೃದ್ಧಿ ಮಾಡಿದ್ದೇವೆ ಅಂತ ಇಲ್ಲಿಗೆ (ಶಿವಮೊಗ್ಗ ಜಿಲ್ಲೆಗೆ) ಬಂದು ನೋಡಿ ಅಂತ ಪದೇಪದೇ ಹೇಳ್ತಿದ್ರು. ಅದಕ್ಕೇ ಬಂದೆ ಎಂದರು.
ಇಲ್ಲಿ ಆಗಿರುವುದೇನು 25 ಕೋಟಿ ರು. ವೆಚ್ಚದಲ್ಲಿ ಮಾಡಿದ ಯುಜಿಡಿ ಕಾಮಗಾರಿ ಹಾಳಾಗಿದೆ. ಪಾರ್ಕ್ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ಆಗಿದೆ. ಇವು ಉದಾಹರಣೆಗಳಷ್ಟೇ. ಇವರ ಅವಧಿಯ ಯೋಜನೆಗಳಲ್ಲಿ ಶೇ.30ರಷ್ಟು ಕೆಲಸವೂ ಆಗಿಲ್ಲ ಎಂದು ಟೀಕಿಸಿದರು.
ಏಕೆ ಹೀಗೆ?: 10 ತಿಂಗಳ ಹಿಂದೆ ಬಿಜೆಪಿಯನ್ನು ಟೀಕಿಸಿ ಕೆಜೆಪಿ ಕಟ್ಟಿದರು. ಬಿಜೆಪಿ ಸೋಲಿಸೋದು ನನ್ನ ಗುರಿ ಎಂದರು. ಇತ್ತ ಬಿಜೆಪಿಯವರೂ ಸಹ ಕೊಳೆ ಹೋಯ್ತು ಎಂದರು. ಈಗ ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿದ್ದಾರೆ. ಅವರು ಹೇಳಿದಂತೆ ಕೇಳೋಕಾ ನೀವು ಇರೋದು ಎಂದು ಮತದಾರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಜಾಪ್ರಭುತ್ವದಲ್ಲಿ ನೀವೇ ಮಾಲೀಕರು. ಅವರು ಹೇಳಿದಂತೆ ಕುಣಿಯೋಕೆ ಅಲ್ಲ ಎಂದರು.
ಅಭಿವೃದ್ಧಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿತ್ತು. ಈಗ 7ನೇ ಸ್ಥಾನಕ್ಕೆ ಹೋಗಿದೆ ಎಂದು ಟೀಕಿಸುತ್ತಾರೆ. ನಾವು ಅಧಿಕಾರಕ್ಕೆ ಬಂದು 11 ತಿಂಗಳಾಯಿತು.
ಇಷ್ಟು ದಿನದಲ್ಲಿ 7ನೇ ಸ್ಥಾನಕ್ಕೆ ಹೋಗುತ್ತಾ ಯಡಿಯೂರಪ್ಪ ಅವರು ಇಳಿದ ಮೇಲೆ ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು.
ಕೋಮುವಾದಿಗಳು: ಬಿಜೆಪಿ ಮೀಸಲಾತಿ ವಿರೋಧಿ. ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ ಪಕ್ಷ ಅಲ್ಲ. ಕೋಮುವಾದಿಗಳು. ಯಾರೂ ನೆಮ್ಮದಿಯಿಂದ ಇರಬಾರದು ಎಂದು ಹುಳಿ ಹಿಂಡುವವರು ಎಂದು ಟೀಕಿಸಿದರು.
ಸಭೆಯಲ್ಲಿ ಸಚಿವ ರೋಷನ್ ಬೇಗ್, ಕಿಮ್ಮನೆ ರತ್ನಾಕರ್ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಅಭ್ಯರ್ಥಿ ಮಂಜುನಾಥ ಭಂಡಾರಿ, ಪಕ್ಷದ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್, ಮಾಜಿ ಶಾಸಕಿ ಪ್ರಫುಲ್ಲ ಮಧುಕರ್, ಮುಖಂಡರಾದ ಶಾಂತವೀರಪ್ಪ ಗೌಡ, ದಿನೇಶ್, ಕಲಗೋಡು ರತ್ನಾಕರ್, ಗೋಣಿ ಮಾಲತೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ರೈತ ಆತ್ಮಹತ್ಯೆ ಆಕಸ್ಮಿಕ
ನಾವು ಅಧಿಕಾರಕ್ಕೆ ಬಂದ ಮೇಲೆ ರೈತ ಆತ್ಮಹತ್ಯೆ ಮಾಡಿಕೊಂಡ ಎಂದು ಜಗದೀಶ್ ಶೆಟ್ಟರ್ ಹೇಳ್ತಾರೆ. ನಿಜ. ಆದರೆ ಅದಕ್ಕೂ ನಮಗೂ ಸಂಬಂಧ ಇಲ್ಲ. ಅದೊಂದು ಆಕಸ್ಮಿಕ ಘಟನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತದ್ದ ಸಂದರ್ಭದಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಠಲ ಅರಭಾವಿ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯು ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು.
ಬಿಎಸ್ವೈ ಗೋಲಿಬಾರ್ ಮಾಡ್ಸಿದ್ರು: ಗುರುವಾರ ಶಿಕಾರಿಪುರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿ, ನನ್ನ ಅವಧಿಯಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜ.
ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಸ್ವಲ್ಪ ದಿನದಲ್ಲೇ ಪೊಲೀಸರಿಗೆ ಹೇಳಿ ಗೋಲಿಬಾರ್ ಮಾಡಿಸಿ ಇಬ್ಬರು ರೈತರನ್ನು ಕೊಂದು ಹಾಕಿದರು ಎಂದು ಟೀಕಿಸಿದರು.
ಎಚ್.ಡಿ. ದೇವೇಗೌಡರು ಮಣ್ಣಿನ ಮಗ. ಯಡಿಯೂರಪ್ಪ ಅವರು ರೈತನ ಮಗ. ಹಾಗಾದರೆ ನಾವೆಲ್ಲಾ ಯಾರ ಮಕ್ಕಳು ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಇವರು ಸ್ವಯಂ ಘೋಷಿತ ರೈತ ನಾಯಕರುಗಳೆಂದು ಟೀಕಿಸಿದರು.
ವಿಪಕ್ಷಗಳಿಗೆ ಪ್ರತ್ಯುತ್ತರ: ಇದಕ್ಕೂ ಮುನ್ನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರ ಇದೇ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಹೇಳಿದ್ದೇ ಬೇರೆ. ಇವರು (ವಿಪಕ್ಷಗಳು) ಅರ್ಥ ಮಾಡಿಕೊಂಡಿದ್ದೇ ಬೇರೆ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಅವರು ಟೀಕಿಸಿದಂತೆ ನಾನು ರೈತರ ಹಂತಕ ಅಲ್ಲ. ಬೆಳಗಾವಿ ರೈತನ ಆತ್ಮಹತ್ಯೆಗೂ, ಸರ್ಕಾರಕ್ಕೂ ಸಂಬಂಧ ಇಲ್ಲ. ಅವರು ಅರ್ಥ ಮಾಡಿಕೊಂಡಂತೆ ರೈತ ಮದ್ಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿಲ್ಲ ಎಂದರು.