ಚುನಾವಣೆ ಸಿಬ್ಬಂದಿಗೆ ಅಗತ್ಯ ಸೌಲಭ್ಯ: ಆಯೋಗ
ವಿಶೇಷ ವರದಿ
ಶಿವಮೊಗ್ಗ: ಚುನಾವಣೆ ಕೆಲಸವೆಂದರೆ ಸಾಕಷ್ಟು ಸರ್ಕಾರಿ ಸಿಬ್ಬಂದಿಗೆ ಅಲರ್ಜಿ. ಯಾಕಪ್ಪಾ ಚುನಾವಣೆ ಕೆಲಸ ಬರುತದೋ ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ಚುನಾವಣೆ ಆಯೋಗ ಇದೇ ಮೊದಲ ಬಾರಿಗೆ ಸಿಬ್ಬಂದಿ ಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.
ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕುಡಿಯಲು ನೀರು, ಊಟ, ತಿಂಡಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ. ಪ್ರತಿ ಚುನಾವಣೆಯಲ್ಲೂ ಊಟ, ವಸತಿಯಿಂದ ನರಳುತ್ತಿದ್ದ ಸಿಬ್ಬಂದಿ ಈ ಬಾರಿ ಇಂತಹ ಸಂಕಟಕ್ಕೆ ಸಿಲುಕುವ ಅವಶ್ಯಕತೆ ಇಲ್ಲ.
ಅಗತ್ಯ ಕ್ರಮ: ಮತ ಯಂತ್ರವನ್ನು ಮತಕೇಂದ್ರಕ್ಕೆ ತೆಗೆದುಕೊಂಡು ಹೋಗುವಾಗಲೇ ಪ್ರತಿ ಸಿಬ್ಬಂದಿಗೆ ಎರಡು ಲೀಟರ್ ನೀರಿನ ಬಾಟಲ್ ನೀಡುವುದಾಗಿ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. ಅದೇ ರೀತಿ ಪ್ರತಿ ಮತ ಕೇಂದ್ರದ ಸಿಬ್ಬಂದಿಗೆ ವ್ಯವಸ್ಥಿತವಾಗಿ ಕಾಫಿ, ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲು ಯೋಜನೆ ರೂಪಿಸಿದೆ. ಈ ಹಿಂದಿನ ಚುನಾವಣೆಯಲ್ಲಿ ಒಂದು ದಿನದ ಊಟ, ತಿಂಡಿ ಬಾಬ್ತು ಎಂದು 150 ನೀಡಲಾಗುತ್ತಿತ್ತು.
ಕ್ಯಾಮೆರಾ ಬಾಡಿಗೆಗೆ: ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯಿಂದಲೇ ಕ್ಯಾಮೆರಾಗಳನ್ನು ಒಂದು ದಿನದ ಮಟ್ಟಿಗೆ ಬಾಡಿಗೆ ತೆಗೆದುಕೊಳ್ಳಲು ಚುನಾವಣೆ ಆಯೋಗ ಉದ್ದೇಶಿಸಿದೆ.
ವಿಡಿಯೋ ರೆಕಾರ್ಡಿಂಗ್ ಸೌಲಭ್ಯವಿರುವ ಸ್ಟಿಲ್ ಕ್ಯಾಮೆರಾಗೆ 400, ವಿಡಿಯೋ ಕ್ಯಾಮೆರಾಗೆ 600 ನೀಡಲು ಉದ್ದೇಶಿಸಲಾಗಿದೆ. ಕ್ಯಾಮೆರಾ ಕೊಡುವವರು ಮುಂಚಿತವಾಗಿ ಹೆಸರು ನೋಂದಾಯಿಸಬೇಕು. ಕ್ಯಾಮೆರಾವನ್ನು ಆಯೋಗ ನಿರ್ದೇಶಿಸುವ ಸಿಬ್ಬಂದಿ ನಿರ್ವಹಿಸುತ್ತಾರೆ. ಈವರೆಗೆ ಖಾಸಗಿಯಾಗಿ ಕ್ಯಾಮೆರಾ ಬಾಡಿಗೆಗೆ ಪಡೆಯಲಾಗುತ್ತಿತ್ತು.
ಮತಕ್ಕೆ ಅವಕಾಶ: ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಸಿಬ್ಬಂದಿ ಪ್ರತಿ ಬಾರಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುತ್ತಿದ್ದರು. ಈ ಬಾರಿ ಆಯೋಗವು ಮತದಾನದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯ ಶೇ. 100ರಷ್ಟು ಮತದಾನ ನಿರೀಕ್ಷಿಸುತ್ತಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದೆ.
ಫಾರಂ 12ಎ ಭರ್ತಿ ಮಾಡಿಕೊಡುವ ಸಿಬ್ಬಂದಿಗೆ ಚುನಾವಣಾ ನಿರ್ವಹಣೆ ಪ್ರಮಾಣಪತ್ರ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ವಿಶೇಷವೆಂದರೆ ಮತದಾನ ಮಾಡಲು ತಮ್ಮ ಸ್ವಕ್ಷೇತ್ರ(ಲೋಕಸಭೆ ಕ್ಷೇತ್ರ)ದಲ್ಲಿ ಕಾರ್ಯನಿರ್ವಹಿಸುವವರಿಗೆ ಮಾತ್ರ ಅವಕಾಶ.
ಹಾಗೆಯೇ ಮತದಾನದ ದಿನದಂದು ರಾಜಕೀಯ ಪಕ್ಷಗಳ ಬೂತ್ ಏಜೆಂಟರ ಗಮನಕ್ಕೆ ಈ ವಿಚಾರ ತಂದು ಮಧ್ಯಾಹ್ನದ ತರುವಾಯವೇ ಮತದಾನ ಮಾಡುವಂತೆ ಆಯೋಗ ಸೂಚನೆ ನೀಡಿದೆ.
ಮಹಿಳೆಯರಿಗೆ ರಿಯಾಯಿತಿ: ಪ್ರತಿ ಚುನಾವಣೆಯಲ್ಲೂ ಮಹಿಳಾ ಸಿಬ್ಬಂದಿ ಸಾಕಷ್ಟು ತ್ರಾಸ ಪಡುತ್ತಿದ್ದರು. ಮತದಾನ ಕೇಂದ್ರದಲ್ಲೇ ರಾತ್ರಿ ವಸತಿಗಾಗಿ ಪರದಾಡುತ್ತಿದ್ದರು. ಆದರೆ, ಇದೇ ಪ್ರಥಮ ಬಾರಿಗೆ ಆಯೋಗವು ಮಹಿಳಾ ಸಿಬ್ಬಂದಿಗೆ ಕೆಲವು ರಿಯಾಯಿತಿ ಘೋಷಿಸಿದೆ.
ಮಹಿಳಾ ಸಿಬ್ಬಂದಿ ತಮ್ಮ ಸ್ವಕ್ಷೇತ್ರ(ವಿಧಾಸಭೆ ಕ್ಷೇತ್ರ)ದಲ್ಲೇ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಮತದಾನದ ಹಿಂದಿನ ದಿನ ರಾತ್ರಿ ಮನೆಗೆ ಹೋಗಿ ಬೆಳಗ್ಗೆ ಮತ ಕೇಂದ್ರಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ.
ಇಷ್ಟು ಅವಕಾಶ ಕಲ್ಪಿಸಿರುವ ಆಯೋಗ, ಸ್ವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರಣ ಯಾವುದೇ ದೂರು ಬಾರದಂತೆ ಎಚ್ಚರಿಕೆ ವಹಿಸುವಂತೆ ಮಹಿಳಾ ಸಿಬ್ಬಂದಿಗೆ ನಿರ್ದೇಶನ ನೀಡಲು ಸೂಚಿಸಿದೆ.