ಸುಭದ್ರ ಭಾರತಕ್ಕೆ ಶುದ್ಧ ಸರ್ಕಾರ ಅಗತ್ಯ: ಎಸ್ಪಿ ಕೌಶಲೇಂದ್ರಕುಮಾರ್
ಶಿವಮೊಗ್ಗ: ಭಾರತವನ್ನು ಮತ್ತಷ್ಟು ಸುಭದ್ರವಾಗಿ ಕಟ್ಟುವ ನಿಟ್ಟಿನಲ್ಲಿ ಶುದ್ಧ ಹಾಗೂ ಬದ್ಧ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಸಂವಿಧಾನದ ಆಶಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಯುವ ಮತದಾರರು ಹಾಗೂ ಕ್ಯಾಂಪಸ್ ಅಂಬಾಸಿಡರ್ಗಳು ಪ್ರೇರಣೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್ ಹೇಳಿದರು.
ಮತದಾರರ ಜಾಗೃತಿ ಅಭಿಯಾನ ಅಂಗವಾಗಿ ನೇಮಿಸಿರುವ ಕ್ಯಾಂಪಸ್ ಅಂಬಾಸಿಡರ್ಗಳಿಗೆ ಜಿಲ್ಲಾಡಳಿತ, ಜೆ.ಎನ್.ಎನ್.ಸಿ.ಇ., ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಜೆ.ಎನ್.ಎನ್.ಸಿ.ಇ. ಎಂ.ಬಿ.ಎ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಮಾಡುವವರಿಗಷ್ಟೇ ಟೀಕೆಯ ಹಕ್ಕಿರುತ್ತದೆ. ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಟೀಕೆಯ ಹಕ್ಕನ್ನೂ ಪಡೆದುಕೊಳ್ಳಬೇಕು. ಆಗ ಸುಭದ್ರ ದೇಶ ಕಟ್ಟಲು ಸಾಧ್ಯವಿದೆ. ಯುವ ಪೀಳಿಗೆ ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಪರಿಶುದ್ಧ ಚುನಾವಣೆಗೆ ಸಹಕರಿಸಬೇಕು. ಮತದಾರರಿಗೆ ಜಾಗೃತಿ ನೀಡಬೇಕು ಎಂದರು.
ಜಿಲ್ಲಾ ಚುನಾವಣಾಧಿಕಾರಿಗಳ ಸಹಿ ಇರುವ ಚುನಾವಣಾ ಸಂದೇಶ ಪತ್ರವನ್ನು ಹಸ್ತಾಂತರಿಸಲಾಯಿತು.
ಚುನಾವಣಾ ಪ್ರಚಾರ ಯಾರು, ಎಲ್ಲಿ?
ಗೀತಾ ಶಿವರಾಜಕುಮಾರ್ (ಜೆಡಿಎಸ್)
ತೀರ್ಥಹಳ್ಳಿ ಕ್ಷೇತ್ರದಲ್ಲಿ ಪ್ರವಾಸ, ಬೆಳಗ್ಗೆ 9ಕ್ಕೆ ತಳಲೆ, 9.30ಕ್ಕೆ ಹಳಗ, 9.45ಕ್ಕೆ ಮುಡುಬ, 10ಕ್ಕೆ ತೂದೂರು, 10.15ಕ್ಕೆ ಸೀಕೆ ರೋಡ್, 10.30ಕ್ಕೆ ಕುಕ್ಕೆ, 11ಕ್ಕೆ ಕುಡುಮಲ್ಲಿಗೆ, 11.30ಕ್ಕೆ ಹೊದಲ, ಮಧ್ಯಾಹ್ನ 12ಕ್ಕೆ ಗುಡ್ಡೇಕೊಪ್ಪ, 12.30ಕ್ಕೆ ಆರಗ, 1ಕ್ಕೆ ಸಂಕದಹೊಳೆ, 2.30ಕ್ಕೆ ಮುಳುಬಾಗಿಲು, 3ಕ್ಕೆ ಕೈಮರ, 3.30ಕ್ಕೆ ಹೆಗ್ಗೋಡು, 3.45ಕ್ಕೆ ತೀರ್ಥಮತ್ತೂರುಮಠ, ಸಂಜೆ 4ಕ್ಕೆ ಹೊಸ ಅಗ್ರಹಾರ, 4.30ಕ್ಕೆ ಹಾರೋಗೊಳಿಗೆ, 5ಕ್ಕೆ ಹರಳೀಮಠ, 5.30ಕ್ಕೆ ಗಡಿಕಲ್ಲು, 6ಕ್ಕೆ ಮಕ್ಕಿಮನೆ, 7ಕ್ಕೆ ಮೃಗವಧೆ, 8ಕ್ಕೆ ಮೇಳಿಗೆ, 9ಕ್ಕೆ ಮೇಲಿನಕುರುವಳ್ಳಿ.
ಶ್ರೀಧರ ಕಲ್ಲಹಳ್ಳ (ಆಪ್)
ಶಿಕಾರಿಪುರದಲ್ಲಿ ಬೆಳಗ್ಗೆ 9 ರಿಂದ 12 ರೋಡ್ ಶೋ, ಮತಯಾಚನೆ ಸಂಜೆ 4ಕ್ಕೆ ಶಿವಮೊಗ್ಗದಲ್ಲಿ ವಿವಿಧೆಡೆ ಸಭೆ, ಮತಯಾಚನೆ.