ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

300 ಬಹುಮಾನ ಯೋಜನೆ

Vishwanath S
Updated On : 6 Apr 2014, 12:34 pm

ಶಿವಮೊಗ್ಗ: ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್‌ಟೈಲ್ಸ್ ಬಟ್ಟೆ ಅಂಗಡಿಯು 30 ವರ್ಷ ಪೂರೈಸಿದ್ದು, ಇದರ ಅಂಗವಾಗಿ ಶ್ರೀನಿಧಿ ಸಮೂಹವು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ವಿನೂತನ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಉದ್ಯಮದ ಪಾಲುದಾರ ಟಿ.ಆರ್.ಅಶ್ವತ್ಥನಾರಾಯಣಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 30ನೇ ವರ್ಷ 300 ಬಹುಮಾನ ಯೋಜನೆಯನ್ನು ಗ್ರಾಹಕರ ಅನುಕೂಲಕ್ಕೆ ಜಾರಿಗೊಳಿಸುತ್ತಿದೆ. ಈ ಯೋಜನೆ 1 ವರ್ಷ ನಡೆಯುತ್ತದೆ. ಪ್ರತಿ 500 ಖರೀದಿಗೆ 1 ಕೂಪನ್ ನೀಡಲಾಗುವುದು. ಪ್ರತಿ ತಿಂಗಳ 24ರಂದು ಡ್ರಾ. ಬಂಪರ್ ಬಹುಮಾನ ಹುಂಡೈ ಕಾರು, ವಿವಿಧ ಗೃಹೋಪಯೋಗಿ ಸಾಮಗ್ರಿಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು. ಸಮಾಜ ಸೇವೆಯಲ್ಲಿಯೂ ಸಕ್ರಿಯವಾಗಿ ತಮ್ಮ ಸಂಸ್ಥೆ ತೊಡಗಿಸಿಕೊಳ್ಳುವುದು ಎಂದು ಮಾಹಿತಿ ನೀಡಿದರು. ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಮಾ.3ರಂದು ಬೆಳಗ್ಗೆ 11 ಗಂಟೆಗೆ ಬೆಕ್ಕಿನ ಕಲ್ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದರು. ಉದ್ಯಮದ ವೆಂಕಟೇಶಮೂರ್ತಿ, ಚೇತನ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಕ್ರಿಕೆಟ್ ಶಿಬಿರ ಇಂದಿನಿಂದ
ಭದ್ರಾವತಿ:  ಸ್ಥಳೀಯ ನ್ಯೂಟೌನ್ ಕ್ರಿಕೆಟ್ ಕ್ಲಬ್ ಹಾಗೂ ಭಾರತೀಯ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಆಶ್ರಯದಲ್ಲಿ ಏ.6 ರಿಂದ 1 ತಿಂಗಳ ಬೇಸಿಗೆ ಕ್ರಿಕೆಟ್ ಶಿಬಿರ ನಡೆಸಲಾಗುವುದು ಎಂದು ನ್ಯೂಟೌನ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಎಲ್.ಆನಂದರಾಮನ್ ತಿಳಿಸಿದ್ದಾರೆ. ಶಿಬಿರದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾನ್ಯತೆ ಪಡೆದ ತರಬೇತುದಾರರು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.  14, 16 ಮತ್ತು 19 ವರ್ಷ ವಯೋವುತಿಯೊಳಗಿನ ಬಾಲಕರು ಮತ್ತು ಬಾಲಕಿಯರು ಭಾಗವಹಿಸಬಹುದು. ಶಿಬಿರದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಕ್ರಿಕೆಟ್ ಸಮವಸ್ತ್ರ ಮತ್ತು ಕ್ರಿಕೆಟ್ ಶೂಗಳನ್ನು ಧರಿಸಿ ಬರಬೇಕು. ಪ್ರವೇಶ ಶುಲ್ಕ 500 ನಿಗದಿಪಡಿಸಲಾಗಿದೆ. ಆಸಕ್ತರು ಏ.6 ರಂದು ಬೆಳಗ್ಗೆ 6.30 ಗಂಟೆಗೆ ಹಾಜರಾಗಿ ಅರ್ಜಿಗಳನ್ನು ಪಡೆದು ಪ್ರವೇಶ ಶುಲ್ಕವನ್ನು ಮುಖ್ಯ ತರಬೇತುದಾರ ಎಲ್.ಆನಂದರಾಮನ್ ಅವರಿಗೆ ನೀಡಿ ಅಧಿಕೃತ ರಸೀದಿ ಪಡೆದು ಅರ್ಜಿಗಳನ್ನು ಭರ್ತಿ ಮಾಡಿ ಹಿಂದಿರುಗಿಸಬೇಕು.  ಭಾಗವಹಿಸುವವರು ಕ್ರಿಕೆಟ್ ಪರಿಕರಗಳ ಕಿಟ್ ಹೊಂದಿರಬೇಕು. ಆಯೋಜಕರು ಚೆಂಡು ಮತ್ತಿತರ ತರಬೇತಿಗೆ ಅಗತ್ಯ ಪರಿಕರ ಮಾತ್ರ ಒದಗಿಸುವರು. ವಿವರಗಳಿಗೆ ಮುಖ್ಯ ತರಬೇತುದಾರ ಎಲ್.ಆನಂದರಾಮನ್ (9448144299) ಅವರನ್ನು ಸಂಪರ್ಕಿಸಬಹುದು.

ಸೌಕರ್ಯಕ್ಕಾಗಿ ಬಿಜೆಪಿ ಬೆಂಬಲಿಸಿ
ಶಿವಮೊಗ್ಗ: ಸ್ವಾತಂತ್ರ್ಯಾ ನಂತರ ಅಲ್ಪಸಂಖ್ಯಾತರ ಸ್ಥಿತಿಗತಿಯಲ್ಲಿ ಇಳಿಮುಖವಾಗಿದೆ ಎಂದು ಸಾಚಾರ್ ಸಮಿತಿ ವರದಿ ಹೇಳಿದೆ. ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೇ ಇದಕ್ಕೆ ಕಾರಣ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮಾಜಿ ರಾಷ್ಟ್ರೀಯ ಅಧ್ಯಕ್ಷ ತನ್ವೀರ್ ಅಹಮದ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಾಚಾರ್ ಸಮಿತಿ ಶಿಫಾರಸುಗಳು ಅನುಷ್ಠಾನ ಆಗಬೇಕೇ ಎಂದು ಅವರನ್ನು ಕೇಳಿದಾಗ ನೇರವಾಗಿ ಉತ್ತರಿಸದೇ, ಅಲ್ಪಸಂಖ್ಯಾತರಿಗೆ ಇನ್ನಷ್ಟು ಸೌಲಭ್ಯಗಳು ಸಿಗಬೇಕು. ಇದಕ್ಕಾಗಿ ಅವರು ಬಿಜೆಪಿ ಬೆಂಬಲಿಸಬೇಕು ಎಂದರು. ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಸುರಕ್ಷಿತವಾಗಿರುತ್ತಾರೆ ಅವರು, ಕಳೆದ 12 ವರ್ಷದಿಂದ ಗುಜರಾತ್‌ನಲ್ಲಿ ಯಾವುದೇ ಕೋಮು ಗಲಭೆಗಳು ನಡೆದಿಲ್ಲ. ಅಭಿವೃದ್ಧಿಗೆ ಗುಜರಾತ್ ರಾಜ್ಯವೇ ಮಾದರಿ ಎಂದು ಹೇಳಿದರು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಬೂಬಕರ್, ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಅಸ್ಲಂ, ಪ್ರಮುಖರಾದ ರೋಸ್ ಫರ್ನಾಂಡಿಸ್, ಏಸುದಾಸ್, ಅಬ್ದುಲ್ ಹಮೀದ್, ಅಬ್ದುಲ್ ಹಮೀದ್, ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್, ಮುಖಂಡರಾದ ಶಂಕರ್, ಬಿಳಕಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.

ಮತದಾರರ ಉತ್ತಮ ಸ್ಪಂದನೆ
ಸೊರಬ: ನಾಮಪತ್ರ ಸಲ್ಲಿಸಿದ ದಿನದಿಂದಲೇ ನಾನು ಹಾಗೂ ಪತಿ ಶಿವರಾಜ್ ಕುಮಾರ್ ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು, ಮತದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು. ಗುರುವಾರ ಪಟ್ಟಣದ ಚಾಮರಾಜಪೇಟೆಯಲ್ಲಿ ಜೆಡಿಎಸ್ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ, ಎಸ್. ಬಂಗಾರಪ್ಪನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರೊಂದಿಗೆ ಅವರು ಮಾತನಾಡಿದರು.  ರೈತರು, ಯುವಕರು, ಮಹಿಳೆಯರು ಹಾಗೂ ಬಂಗಾರಪ್ಪ ಅಭಿಮಾನಿಗಳು ಆತ್ಮೀಯತೆಯಿಂದ ಕಂಡಿದ್ದಾರೆ. ಎಲ್ಲಾ ಸಭೆಗಳಲ್ಲೂ ಮತದಾರರು ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಿದ್ದು, ಜನ ಬೆಂಬಲ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ವಿಶ್ವಾಸವ್ಯಕ್ತಪಡಿಸಿದರು. ಗೀತಾ ಅವರ ಅಕ್ಕ ಸುಜಾತಾ ತಿಲಕ್ ಕುಮಾರ್ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಮಹಿಳಾ ಅಧ್ಯಕ್ಷೆ ಶೇಖರಮ್ಮ, ರಾಜ್ಯ ಕಾರ್ಯದರ್ಶಿ ಎನ್. ಕುಮಾರ್, ಪಪಂ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಸದಸ್ಯೆ ಬೇಬಿ ಜುಲೇಖ, ಮುಖಂಡ ಶಬ್ಬೀರ್ ಅಹ್ಮದ್, ಮಂಚಿ ಸೋಮಪ್ಪ, ಶ್ರೀಕಾಂತ್ ಶೇಟ್, ಫಯಾಜ್ ಅಹ್ಮದ್ ಮೊದಲಾದವರು ಇದ್ದರು.

ಬಿಜೆಪಿ ಸ್ಥಾಪನಾ ದಿನಾಚರಣೆ ಇಂದು
ಶಿವಮೊಗ್ಗ: ಜಿಲ್ಲಾ ಬಿಜೆಪಿಯು ಏ.6ರಂದು ಬೆಳಗ್ಗೆ ಜಿಲ್ಲಾದ್ಯಂತ ಪಕ್ಷದ ಸಂಸ್ಥಾಪನಾ ದಿನ ಆಚರಿಸುತ್ತಿದ್ದು, ಕಾರ್ಯಕ್ರಮದಲ್ಲಿ 60 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಏ.7ರಂದು ಪಕ್ಷದ ರಾಷ್ಟ್ರೀಯ ಮುಖಂಡ,  ಅರ್ಥಶಾಸ್ತ್ರಜ್ಞ ಹಾಗೂ 2ಜಿ ಹಗರಣ ಬಯಲಿಗೆಳೆದ ಸುಬ್ರಹ್ಮಣ್ಯನ್ ಸ್ವಾಮಿ ಪಕ್ಷದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಕ್ಷದ ವಕ್ತಾರ ಎಂ.ಶಂಕರ್, ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಶಿವಮೊಗ್ಗ ಕ್ಷೇತ್ರದ 1944 ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿ ಪಕ್ಷದ ಧ್ವಜಾರೋಹಣ ಮಾಡಲಾಗುತ್ತದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಪಾಲ್ಗೊಳ್ಳುವರು. ವೈದ್ಯರು, ಎಂಜಿನಿಯರ್, ಪ್ರೊಫೆಸರ್ ಸೇರಿದಂತೆ 30 ವೃತ್ತಿಪರರು ಸ್ನೇಹಮಿಲನದಲ್ಲಿ ಪಾಲ್ಗೊಳ್ಳುವರು. ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ, ಆಯನೂರು ಮಂಜುನಾಥ್, ಎಂ.ಬಿ. ಭಾನುಪ್ರಕಾಶ್, ಬಿ.ವೈ. ರಾಘವೇಂದ್ರ,  ಸಿದ್ದರಾಮಣ್ಣ ಉಪಸ್ಥಿತರಿರುವರು. ಎನ್‌ಇಎಸ್ ಮೈದಾನದಲ್ಲಿ ಸಂಜೆ ನಡೆವ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುತ್ತಾರೆ ಎಂದು ವಿವರಿಸಿದರು.

ಪ್ರಚಾರಕ್ಕೆ ತಾರೆಯರ ದಂಡು
ಶಿವಮೊಗ್ಗ: ಜೆಡಿಎಸ್ ಅಭ್ಯರ್ಥಿ ಪರ ನಟ ಉಪೇಂದ್ರ, ಶಿವರಾಜ್‌ಕುಮಾರ್ ಅವರು ಭಾನುವಾರ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿ ಪ್ರಚಾರ ನಡೆಸುವರು. ಈ ಸಂದರ್ಭದಲ್ಲಿ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್, ಸೊರಬ ಶಾಸಕ ಮಧು ಬಂಗಾರಪ್ಪ ಹಾಜರಿರುವರು ಎಂದು ಜೆಡಿಎಸ್ ತಿಳಿಸಿದೆ. ರೋಡ್ ಶೋ ಬೆಳಗ್ಗೆ 10 ಗಂಟೆಗೆ ಕುಂಸಿ ಈಸೂರಿನಿಂದ ಆರಂಭವಾಗಿ, ಶಿಕಾರಿಪುರ(12 ಗಂಟೆ), ಶಿರಾಳಕೊಪ್ಪ (1 ಗಂಟೆ), ಆನವಟ್ಟಿ (2), ಕುಪ್ಪಗಡ್ಡೆ (2.30), ಸೊರಬ (3ಗಂಟೆ), ಉಳವಿ (3.30), ಸಾಗರದಲ್ಲಿ (ಸಂಜೆ 4.30), ಆನಂದಪುರ (5.30), ಶಿವಮೊಗ್ಗದಲ್ಲಿ ಸಂಜೆ 7 ಗಂಟೆಗೆ ತಲುಪಲಾಗುತ್ತದೆ.
ಬಿಜೆಪಿ ಪರ: ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ಪ್ರಚಾರ ನಡೆಸಲು ನಟಿ ರಕ್ಷಿತಾ, ತಾರಾ ಹಾಗೂ ಮಾಳವಿಕ ಆಗಮಿಸುತ್ತಿದ್ದಾರೆ. ಆದರೆ, ಅವರ ಪ್ರಚಾರದ ದಿನಾಂಕ ಹಾಗೂ ಸಮಯ ಶೀಘ್ರವೇ ನಿಗದಿಯಾಗುವುದು ಎಂದು ಬಿಜೆಪಿ ತಿಳಿಸಿದೆ.

ಸ್ವದೇಶಿ ಆರ್ಥಿಕ ನೀತಿ ಅಗತ್ಯ
ಸೊರಬ: ದೇಶದಲ್ಲಿನ ಆರ್ಥಿಕ ಅಸಮತೋಲನ ಹೋಗಲಾಡಿಸಲು ಮೊದಲು ಪ್ರಜೆಗಳು ನಿದ್ರಾವಸ್ಥೆ ಹೊರಬಂದು ಜಾಗೃತರಾಗಬೇಕು ಎಂದು ಅರ್ಥಶಾಸ್ತ್ರಜ್ಞ ಬಿ.ಎಂ. ಕುಮಾರಸ್ವಾಮಿ ತಿಳಿಸಿದರು. ಅವರು ಗುರುವಾರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅರ್ಥಶಾಸ್ತ್ರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ರೂಪಾಯಿ ಮೌಲ್ಯ ಕುಸಿತದ ಕಾರಣ ಮತ್ತು ಪರಿಣಾಮಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಪ್ರಜೆಗಳು ಸರ್ಕಾರಕ್ಕೆ ಮಾರ್ಗದರ್ಶನ ನೀಡುವಂತಿರಬೇಕು. ಇಲ್ಲದೇ ಹೋದಲ್ಲಿ ಆರ್ಥಿಕ ಅಸಮತೋಲನ ಉಂಟಾಗುತ್ತದೆ. ಸ್ವದೇಶೀ ಆರ್ಥಿಕ ನೀತಿ ಜಾರಿಗೆ ತರಬೇಕು. ಆಗ ಮಾತ್ರ ರೂಪಾಯಿ ಅಪಮೌಲ್ಯ ತಡೆಗಟ್ಟಲು ಸಾಧ್ಯ. ಕೃಷಿಗೆ ಪ್ರಾಧಾನ್ಯತೆ ನೀಡಿ, ಉತ್ತಮ ದರ ನಿಗದಿಪಡಿಸಬೇಕು ಎಂದರು. ಪ್ರಾಂಶುಪಾಲ ಮೊಹಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು.  ಉಪನ್ಯಾಸಕ ಡಾ. ಶ್ಯಾಂ ಸುಂದರ್, ಆರ್. ಗಂಗಾಧರ, ಬಸವರಾಜಪ್ಪ, ರವೀಂದ್ರಭಟ್ ಕುಳಿಬೀಡು, ಪ್ರಕಾಶ್, ಅಶ್ವತ್ಥನಾರಾಯಣ, ಗೀತಾ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಅಮೃತಾ ಪ್ರಾರ್ಥಿಸಿದರು. ಚಂದ್ರಿಕಾ ಸ್ವಾಗತಿಸಿದರು. ಯೋಗೀಶ್ ವಂದಿಸಿದರು. ಮಾಲತೇಶ ಅತಿಥಿಗಳ ಪರಿಚಯ ಮಾಡಿದರು.

ಸಿಎಂಗೆ ಎಂಪಿಎಂ ಉದ್ಯೋಗಿಗಳ ಮನವಿ
ಭದ್ರಾವತಿ:  ಮೈಸೂರು ಕಾಗದ ಕಾರ್ಖಾನೆಯ ಉಳಿವು ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕಾರ್ಖಾನೆಯ ಈಗಿರುವ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಗಳನ್ನು ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಬೇಕು ಎಂದು ಎಂಪಿಎಂ ಕಾಗದ ಮತ್ತು ಸಕ್ಕರೆ ಕಾರ್ಖಾನೆ ಉದ್ಯೋಗಿಗಳ ಸಂಘವು ಏ.3 ರಂದು ಭದ್ರಾವತಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ಕಾರ್ಖಾನೆಯ ಮಹಾಪ್ರಬಂಧಕರಾಗಿ ಕೆಎಎಸ್ ಅಧಿಕಾರಿಯೊಬ್ಬರನ್ನು ಕನಿಷ್ಠ 5 ವರ್ಷಗಳ ಕಾಲ ನೇಮಿಸಬೇಕು. ಬಂಡವಾಳ ಹೂಡಬೇಕು. 300 ಟಿಪಿಡಿ ಸಾಮರ್ಥ್ಯದ ಪಲ್ಪ್ ಮಿಲ್ ಸ್ಥಾಪಿಸಬೇಕು. ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯವನ್ನು 2500 ಮೆಟ್ರಿಕ್ ಟನ್‌ನಿಂದ 5000 ಮೆಟ್ರಿಕ್ ಟನ್‌ಗಳಿಗೆ ಏರಿಸಬೇಕು. ಎಥನಾಲ್ ಉತ್ಪಾದನಾ ಘಟಕ ಸ್ಥಾಪಿಸಬೇಕು. ಕೋ-ಜನರೇಶನ್ ಮೂಲಕ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಬೇಕು. ತುಟ್ಟಿಭತ್ಯೆ ಪಾವತಿಸಲು ಆಡಳಿತ ಮಂಡಳಿಗೆ ಆದೇಶ ನೀಡಬೇಕು. ಕಾಯಂ-ಗುತ್ತಿಗೆ ಕಾರ್ಮಿಕರ ವೇತನ ಪರಿಷ್ಕರಣೆ ಬೇಡಿಕೆ ಈಡೇರಿಸಬೇಕು ಎಂದು ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಸಿ.ಎಸ್.ಶಿವಮೂರ್ತಿ ಮತ್ತು ಗೌರವಾಧ್ಯಕ್ಷ ಸದಾಶಿವಲಿಂಗೇಗೌಡ ಇದ್ದರು.

ಬಡವರ ಏಳಿಗೆಗೆ ಶ್ರಮಿಸಿದ ಬಾಬೂಜೀ
ಸೊರಬ: ಬಾಬು ಜಗಜೀವನ್‌ರಾಮ್ ಅವರು ದೀನ-ದಲಿತರ ಏಳಿಗೆಗಾಗಿ ಶ್ರಮಿಸಿ ದೇಶದ ಮಹಾನ್ ಹುದ್ದೆ ಅಲಂಕರಿಸಿದ ಧೀಮಂತ ನಾಯಕ ಎಂದು ತಹಸೀಲ್ದಾರ್ ತಿಪ್ಪುರಾವ್ ತಿಳಿಸಿದರು. ತಾಲೂಕು ಕಚೇರಿಯ ಆವರಣದಲ್ಲಿ ಶನಿವಾರ ಜಗಜೀವನ್‌ರಾಮ್ ಅವರ 107ನೇ ಜನ್ಮದಿನದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡವರ ಏಳಿಗೆಗಾಗಿ ಅವರು ಅನೇಕ ಕಾರ್ಯಕ್ರಮ ನಿರೂಪಿಸಿದ್ದರು. ಪ್ರತಿಯೊಬ್ಬರು ಮುಖ್ಯವಾಹಿನಿಗೆ ಬರುವುದರ ಮೂಲಕ ಆರ್ಥಿಕ ಹಾಗೂ ಸಾಮಾಜಿಕ, ಶೈಕ್ಷಣಿಕ ಸವಲತ್ತು ಪಡೆಯುವಂತಾಗಬೇಕು ಎಂದಿದ್ದರು. ಅವರ ಆದರ್ಶ ಮತ್ತು ತತ್ವ- ಸಿದ್ಧಾಂತಗಳು ಸಮಾಜಕ್ಕೆ ಮಾದರಿಯಾಗಿದ್ದು, ಅವುಗಳನ್ನು ಉಳಿಸಿ- ಬೆಳೆಸುವಲ್ಲಿ ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕಿದೆ ಎಂದರು. ಕಾರ್ಯನಿರ್ವಹಣಾಧಿಕಾರಿ ಇಸ್ಮಾಯಿಲ್, ಎಆರ್‌ಒ ಶ್ರೀಧರ್, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್, ನಾಗರಾಜ್ ಎಂ., ಶಶಿಕಲಾ, ಯುವರಾಮ್ ನಾಯ್ಕ, ಕೆ.ಸುರೇಶ್, ಅನ್ವರ್‌ಖಾನ್, ವೆಂಕಟೇಶ್, ರಾಮಚಂದ್ರ, ಅಂಬಾಜಿ, ರಾಮಪ್ಪ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಸ್ಥಾಪನಾ ದಿನ ಇಂದು
ಸೊರಬ:   ಭಾರತೀಯ ಜನತಾ ಪಕ್ಷ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಏ.6ರಂದು ತಾಲೂಕಿನ ಪ್ರತಿ ಬೂತ್, ವಾರ್ಡ್, ಪಂಚಾಯ್ತಿಗಳಲ್ಲಿ ಬೆಳಗ್ಗೆ 9.30 ರಿಂದ 10.30 ರವರೆಗೆ ಬಿಜೆಪಿ ಧ್ವಜಾರೋಹಣ, ಬೆಳಿಗ್ಗೆ 11 ಗಂಟೆಗ್ಕೆ ತಾಲೂಕು ಉಳವಿ ಗ್ರಾಮದಲ್ಲಿ ಮಹಿಳಾ ಕಾರ್ಯಕರ್ತರ ಸಮಾವೇಶ, ಮಧ್ಯಾಹ್ನ 3 ರಂದು ಪಟ್ಟಣ ಹೊರವಲಯದ ಭಾವೆ ಫಾರಂನಲ್ಲಿ ಕಾರ್ಯಕರ್ತರ ಸಭೆ, ರೋಡ್ ಶೋ ನಡೆಯಲಿದೆ ಎಂದು ಪಕ್ಷದ ಕಾರ್ಯದರ್ಶಿ ಡಿ.ಶಿವಯೋಗಿ ತಿಳಿಸಿದ್ದಾರೆ. ವಿಧಾನಪರಿಷತ್ ಸದಸ್ಯೆ ಭಾರತಿಶೆಟ್ಟಿ, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಜಿಪಂ ಮಾಜಿ ಅಧ್ಯಕ್ಷೆ ಶುಭ ಕೃಷ್ಣಮೂರ್ತಿ ಮತ್ತಿತರ ಮುಖಂಡರು ಭಾಗವಹಿಸುವರು. ಏ.7 ರಂದು ಲೋಕಸಭಾ ಚುನಾವಣೆಯ ಪಕ್ಷದ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಮಾಜಿ ಸಚಿವ ಎಚ್.ಹಾಲಪ್ಪ ನೇತೃತ್ವದಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಿಗೆ ತೆರಳಿ ಮತಯಾಚಿಸಲಾಗುವುದು. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಪಕ್ಷದ ತಾಲೂಕು ಪ್ರಮುಖರು ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

ಧರ್ಮದಿಂದ ಉನ್ನತಿ ಸಾಧ್ಯ
ಜೋಗ್‌ಫಾಲ್ಸ್: ಧರ್ಮ ಮಾರ್ಗಗಳಿಂದ ಮನುಷ್ಯನ ಉನ್ನತೀಕರಣ ಸಾಧ್ಯ ಎಂದು ಹರಿಕಥೆ ಕೀರ್ತನಕಾರರಾದ ಗಾಯಿತ್ರಿ ಜಿ. ಭಟ್ ತಿಳಿಸಿದರು. ಇಲ್ಲಿನ ಶ್ರೀರಾಮ ಸೇವಾ ಸಮಿತಿಯವರು ಶ್ರೀರಾಮ ನವಮಿ ಉತ್ಸವದ ಅಂಗವಾಗಿ ಶ್ರೀರಾಮಲೀಲಾ ಮೈದಾನದಲ್ಲಿ ನಡೆದ ಸೀತಾ ಸ್ವಯಂವರ ಎಂಬ ಹರಿಕಥೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ರಾಮನಾಮ ಜಪವೇ ಪ್ರಧಾನವಾದುದು. ಹರಿಕಥೆ, ರಾಮಾಯಣ, ಮಹಾಭಾರತ ದಂತಹ ಪ್ರವಚನ ಕೇಳುವುದರಿಂದ ಆತ್ಮಶುದ್ಧಿಯಾಗಿ ಧರ್ಮ ಮಾರ್ಗ ಲಭ್ಯವಾಗುತ್ತದೆ. ಇಂಥವುಗಳನ್ನು ಕೇಳುವುದರಿಂದ ಹಾಗೂ ಹಾಡುವುದರಿಂದ ಬದುಕಿನಲ್ಲಿ ಎದುರಾಗುವ ಕಷ್ಟ- ಸುಖಗಳನ್ನು ಸಮನ್ವಯತೆಯಿಂದ ಸ್ವೀಕರಿಸುವ ಮಾನಸಿಕ ಸ್ಥೈರ್ಯ ಪಡೆಯಬಹುದಾಗಿದೆ. ಯುಗಾದಿಯಂದು ತಿನ್ನುವ ಬೇವು- ಬೆಲ್ಲವು ಕಷ್ಟಸುಖಗಳನ್ನು ಸಮನ್ವಯತೆಯಿಂದ ಸ್ವೀಕರಿಸುವ ಸಂಕೇತವಾಗಿದೆ. ಜೀವನದಲ್ಲಿ ಎದುರಾಗುವ ಕಷ್ಟ- ಸುಖಗಳನ್ನು ಸಮನ್ವಯತೆಯಿಂದ ಎದುರಿಸಬೇಕಾಗಿದ್ದು, ಸುಖ ಬಂದಾಗ ಹಿಗ್ಗದೆ ಕಷ್ಟ ಬಂದಾಗ ಕುಗ್ಗದೆ ಎದುರು ಬಂದ ತೊಂದರೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ಯಶಸ್ಸು ಕಾಣುವುದರಲ್ಲಿ ಸುಖ ಅಡಗಿದೆ ಎಂದರು. ಸಿದ್ದರಾಜು ಸ್ವಾಗತಿಸಿದರು. ಎಂ.ಎಸ್. ಸತೀಶ್ ನಿರೂಪಿಸಿ, ದಿನೇಶ್ ವಂದಿಸಿದರು.

'ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲ'
ಶಿವಮೊಗ್ಗ: ಪ್ರಚಾರಕ್ಕೆ ಹೋದ ಸಂದರ್ಭ ಇಬ್ಬರು ಮಹಿಳೆಯರು ತಮಗಿನ್ನೂ ಹಕ್ಕುಪತ್ರ ಏಕೆ ಸಿಕ್ಕಲ್ಲ ಎಂದು ಕೇಳಿದ್ದರಲ್ಲಿ ತಪ್ಪೇನೂ ಇಲ್ಲ. ಆದರೆ ಅವರಿಗೆ ಹಕ್ಕುಪತ್ರ ಸಿಗದಿರುವುದಕ್ಕೆ ತಾಂತ್ರಿಕ ಕಾರಣಗಳಿವೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶುಕ್ರವಾರ ಪ್ರಚಾರ ನಡೆಸುತ್ತಿದ್ದ ಸಂದರ್ಭ ಇಬ್ಬರು ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗ ನಗರದಲ್ಲಿ 38 ಘೋಷಿತ ಸ್ಲಂಗಳಿದ್ದು, ಇಲ್ಲಿನ ಎಲ್ಲಾ ನಿವಾಸಿಗಳಿಗೂ ಹಕ್ಕುಪತ್ರ ನೀಡಲಾಗಿದೆ. ಸ್ಲಂ ಎಂದು ಘೋಷಣೆ ಆಗದ 12 ಪ್ರದೇಶಗಳಿವೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಬೇಕೆಂದು ಹೋರಾಡಿದ್ದೆವು. ಅಧಿಕಾರಕ್ಕೆ ಬಂದಾಗ ಮಸೂದೆಯನ್ನೂ ಮಾಡಿದೆವು. ಅದರಂತೆ ಘೋಷಿತ ಸ್ಲಂಗಳಲ್ಲಿರುವ ಎಲ್ಲಾ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಯಿತು. ಆದರೆ ಘೋಷಣೆಯಾಗದ ಸ್ಲಂಗಳಲ್ಲಿ ಹಕ್ಕುಪತ್ರ ನೀಡುವುದಕ್ಕೆ ಆಗಿಲ್ಲ. ಭೂಮಾಲೀಕರಿಗೆ ಪರಿಹಾರ ನೀಡಿದ ನಂತರ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ಎಂದು ಹೈಕೋರ್ಟ್ ಆದೇಶ ನೀಡಿದೆ. ರಾಜ್ಯಾದ್ಯಂತ ಸಮೀಕ್ಷೆ ನಡೆಯುತ್ತಿದೆ. ಭೂಮಾಲೀಕರಿಗೆ ಪರಿಹಾರ ಎಷ್ಟೆಂದು ನಿಗದಿಯಾಗಿಲ್ಲ. ಹಾಗಾಗಿ ಹಕ್ಕುಪತ್ರ ಸಿಕ್ಕಿಲ್ಲ ಎಂದಿದ್ದಾರೆ.

ಮಕ್ಕಳಿಗಾಗಿ ಬೇಸಿಗೆ ಶಿಬಿರ
ಶಿವಮೊಗ್ಗ: ಕಳೆದ 80 ವರ್ಷಗಳಿಂದ ಕನ್ನಡ ನಾಡು ನುಡಿಗಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿರುವ ಕರ್ನಾಟಕ ಸಂಘವು ಏ.13 ರಿಂದ 25 ರವರೆಗೆ ವೈಶಿಷ್ಟ್ಯಪೂರ್ಣ ಚಟುವಟಿಕೆಗಳ ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಹೆಸರಾಂತ ರಂಗಕರ್ಮಿ ಡಾ.ಸಾಸ್ವೇಹಳ್ಳಿ ಸತೀಶ್ ಶಿಬಿರದ ನಿರ್ದೇಶಕರಾಗಿದ್ದು, ಹಲವು ರಂಗಗಳ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಮಕ್ಕಳಿಗೆ ವೈವಿದ್ಯಮಯ ಅನುಭವ ನೀಡಲಿದ್ದಾರೆ. ರಂಗ ಸಂಗೀತ, ಜಾನಪದ ಕ್ರೀಡೆಗಳು, ಕೋಲಾಟ, ಮುಖವಾಡ ತಯಾರಿಕೆ, ಮೇಕಪ್ ಇತ್ಯಾದಿ ಚಟುವಟಿಕೆಗಳ ಜೊತೆಗೆ ಪೂರ್ಣ ಪ್ರಮಾಣದ ಮಕ್ಕಳ ನಾಟಕ ಸಿದ್ಧಗೊಳಿಸಿ, ಶಿಬಿರದ ಕೊನೆಯ ದಿನದಂದು ಪ್ರದರ್ಶನ ಮಾಡಲಾಗುತ್ತಿದೆ. 12 ರಿಂದ 16 ವರ್ಷ ವಯಸ್ಸಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು. ಕೇವಲ 40 ಮಕ್ಕಳಿಗೆ ಮಾತ್ರ ಅವಕಾಶವಿದೆ. ಆಸಕ್ತರು ಸಂಘದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.  ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 98443 67071,  81059 29132,  85480 39172, 08182-277406 ಸಂಪರ್ಕಿಸಬಹುದು.

ಗೀತಾ ಪರ ಉಪೇಂದ್ರ ಪ್ರಚಾರ
ಶಿವಮೊಗ್ಗ: ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ರಿಯಲ್ ಸ್ಟಾರ್ ಉಪೇಂದ್ರ 2 ದಿನ ಪ್ರಚಾರ ಮಾಡಲಿದ್ದಾರೆ. ಅವರು ಇಡೀ ಕ್ಷೇತ್ರಾದ್ಯಂತ ಪ್ರವಾಸ ಮಾಡುವ ರೀತಿಯಲ್ಲಿ ಪಕ್ಷವು ಕಾರ್ಯಕ್ರಮ ಆಯೋಜನೆ ಮಾಡಿದೆ. ನಗರದಲ್ಲಿ ಶನಿವಾರ ಶಾಸಕ ಮಧು ಬಂಗಾರಪ್ಪ ಅವರು ಈ ವಿಷಯ ತಿಳಿಸಿದರು. ಉಪೇಂದ್ರ ಏ. 6ರಂದು ಬೆಳಗ್ಗೆ 10 ಗಂಟೆಗೆ ಕುಂಸಿ, 12ಕ್ಕೆ ಶಿಕಾರಿಪುರ, ಮಧ್ಯಾಹ್ನ 1 ಗಂಟೆಗೆ ಶಿರಾಳಕೊಪ್ಪ, 2ಕ್ಕೆ ಆನವಟ್ಟಿ, 2.30ಕ್ಕೆ  ಕುಪ್ಪಗದ್ದೆ, 3 ಗಂಟೆಗೆ ಸೊರಬ, 3.30ಕ್ಕೆ ಉಳವಿ, 4.30ಕ್ಕೆ ಸಾಗರ 5.30ಕ್ಕೆ ಆನಂದಪುರಂ ಮೂಲಕ ಸಾಗಿ ಸಂಜೆ 7 ಗಂಟೆಗೆ ಶಿವಮೊಗ್ಗಕ್ಕೆ ಬರಲಿದ್ದಾರೆ.7ರಂದು ಬೆಳಗ್ಗೆ 10 ಗಂಟೆಗೆ ಆಯನೂರು, 11ಕ್ಕೆ ರಿಪ್ಪನ್ ಪೇಟೆ, 12ಕ್ಕೆ ಕೋಣಂದೂರು, 1ಕ್ಕೆ ತೀರ್ಥಹಳ್ಳಿಗೆ ಭೇಟಿ ನೀಡಿ ಸಂಜೆ 4 ಗಂಟೆಗೆ ಬೈಂದೂರು ಕ್ಷೇತ್ರಕ್ಕೆ ತೆರಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜಿಲ್ಲೆಗೆ ಭೇಟಿ ನೀಡಲಿದ್ದು, ಏ.8ರಂದು 3 ಕಡೆ ಸಭೆಯಲ್ಲಿ ಗೀತಾ ಪರ ಪ್ರಚಾರ ನಡೆಸಲಿದ್ದಾರೆ. ತಾಯಿ ಶಕುಂತಲಮ್ಮ ಅವರೂ 1 ದಿನ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದರು. ಮುಖಂಡ ಜಮೀರ್ ಅಹಮದ್ ಏ.7ರಂದು ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಸಾಗರ, ಶಿವಮೊಗ್ಗ, ಭದ್ರಾವತಿಯಲ್ಲಿ ಪ್ರಚಾರ ನಡೆಸದ್ದಾರೆ ಎಂದರು.

ಕುಡಿವ ನೀರು ಸೇವೆಗೆ ಚಾಲನೆ
ಭದ್ರಾವತಿ:  ಇಲ್ಲಿನ ಪ್ರಶಾಂತಿ ಸೇವಾ ಟ್ರಸ್ಟ್, ಸತ್ಯಸಾಯಿ ಸೇವಾ ಸಮಿತಿ ಮತ್ತು ಸತ್ಯಸಾಯಿ ಶಾಲಾ ಸಮಿತಿ ಆಶ್ರಯದಲ್ಲಿ ಬುಧವಾರದಿಂದ 3 ತಿಂಗಳ ಕಾಲ ಪಟ್ಟಣದ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ಉಚಿತ ಕುಡಿಯುವ ನೀರು ಸರಬರಾಜು ಸೇವೆ ಪ್ರಾರಂಭಿಸಲಾಯಿತು. ರಾಜ್ಯ ಸಾರಿಗೆ ಸಂಸ್ಥೆಯ ಡಿಪೋ ವ್ಯವಸ್ಥಾಪಕ ಹೆನ್ರಿ ರಾಡ್ರಿಗ್ಸ್ ಯೋಜನೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಟ್ರಸ್ಟ್ ಆಡಳಿತಾಧಿಕಾರಿ ಪ್ರಭಾಕರ ಬೀರಯ್ಯ, ಸಹ ಕಾರ್ಯದರ್ಶಿ ಶಿವಪ್ಪ, ಟ್ರಸ್ಟಿಗಳಾದ ಡಿ.ಜಿ.ಸೇಠ್, ಮುರಳೀಧರ್, ರಾಮಕೃಷ್ಣಯ್ಯ, ಸತೀಶ್, ಆರ್.ವಿನಯ ಹಾಗೂ ಶಾಲೆ ಮುಖ್ಯೋಪಾಧ್ಯಾಯ ಜಿ.ಪಿ.ಪರಮೇಶ್ವರಪ್ಪ, ಎಚ್.ಪಿ. ಪ್ರಸನ್ನ, ರಮೇಶ್ ಇದ್ದರು.
ಕಾರ್ಯಾಗಾರ: ಶಿವಮೊಗ್ಗದ ಕುವೆಂಪು ವಿವಿಯ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗ, ಮುಂಬಯಿಯ ರಾಮಾನುಜನ ಮ್ಯಾಥಮ್ಯಾಟಿಕಲ್ ಸೊಸೈಟಿ ಆಶ್ರಯದಲ್ಲಿ ಕುವೆಂಪು ವಿವಿಯಲ್ಲಿ ಏ.5 ರಿಂದ 12ರವರೆಗೆ ಋಆಈ್ಖಔಖಿಘ ಊಃಖಐಈಏಂಊಃಖಿ ಕಿಖಕಎಖಆಂಂಊ-2014 08 ಉಛಣಡ ಐಟಿಡಡ್ಠ್ಡ್ಛಿಡ್ಝ್ಟಿಟಿಛಟ ಢ್ಟ್ಠ್ಞಿಝ್ಝಠ ್ಝಟಿ ಉ್ಝಜಿಜಿಜ್ಠಜಟಿಡ್ಝಿಛಟ ಎಜ್ಟಟಜಡ್ಠಿಣ ಕುರಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಿದೆ. ರಾಮಾನುಜನ್ ಮ್ಯಾಥಮ್ಯಾಟಿಕಲ್ ಸೊಸೈಟಿ ಅಧ್ಯಕ್ಷ ಪ್ರೊ. ರವಿ ಕುಲಕರ್ಣಿ ಏ.5ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.

ಪ್ರಸನ್ನ ಭಂಡಾರಿ ಪ್ರಚಾರ
ಶಿರಾಳಕೊಪ್ಪ:  ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಜಿಲ್ಲಾ ಲೋಕಸಭಾ ಅಭ್ಯರ್ಥಿ ಮಂಜುನಾಥ ಭಂಡಾರಿ ಪತ್ನಿ ಪ್ರಸನ್ನ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ನೂರಾರು ಕಾರ್ಯಕರ್ತರೊಂದಿಗೆ ಮತಯಾಚಿಸಿದ ಅವರು ಕೊನೆಯಲ್ಲಿ ಬಸ್ ನಿಲ್ದಾಣದಲ್ಲಿ ಪ್ರಚಾರ ಭಾಷಣ ಮಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಹಾಗೆಯೇ ಕಾಂಗ್ರೆಸ್ ಪಕ್ಷ ಉತ್ತಮ ಕಾರ್ಯಕರ್ತರ ಪಡೆ ಹೊಂದಿದೆ. ಈ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದರು.
ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ನಗರದ ಮಹದೇವಪ್ಪ, ಜಿಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ, ಬ್ಲಾಕ್ ಅಧ್ಯಕ್ಷ ಹನುಮಂತಪ್ಪ, ತಡಗಣಿ ರಾಜಣ್ಣ, ಗಾಯತ್ರಿ, ಪಪಂ ಅಧ್ಯಕ್ಷೆ ಖಾತೂನ್, ಪಪಂ ಸದಸ್ಯರು, ಭೀಮಣ್ಣ, ಬಳ್ಳಿಗಾವಿ ಉಜ್ಜಪ್ಪ, ಶೆಟ್ಟರ್ ಗಂಗಾಧರ್, ರೂಪಾ ಹಾಲೇಶ್ ಹಾಗು ಹಲವಾರು ಪ್ರಮುಖರು ಇದ್ದರು.

ಷಟಲ್ ಬ್ಯಾಡ್ಮಿಂಟನ್ ತರಬೇತಿ
ಶಿವಮೊಗ್ಗ: ಯುವ ಸಬಲೀಕರಣ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏ.10ರಿಂದ 30ರ ವರೆಗೆ  ಶಿವಮೊಗ್ಗ ಒಳಾಂಗಣ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ 20 ವರ್ಷ ವಯೋವುತಿಯೊಳಗಿನ ಬಾಲಕ, ಬಾಲಕಿಯರು ಭಾಗವಹಿಸಬಹುದಾಗಿದ್ದು, ಬೇಸಿಗೆ ಷಟಲ್ ಬ್ಯಾಡ್ಮಿಂಟನ್ ತರಬೇತಿ ಶಿಬಿರದಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು. ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಒಳಾಂಗಣ ಕ್ರೀಡಾಂಗಣ, ಶಿವಮೊಗ್ಗ ಇಲ್ಲಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಏಪ್ರಿಲ್ 9ರೊಳಗಾಗಿ ನೀಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.  ಷಟಲ್ ಬ್ಯಾಡ್ಮಿಂಟನ್ ತರಬೇತಿಗಾಗಿ ಏಪ್ರಿಲ್ 10ರಂದು ಬೆಳಿಗ್ಗೆ 9ಗಂಟೆಗೆ ಬ್ಯಾಡ್ಮಿಂಟನ್ ತರಬೇತುದಾರ ಅರುಣ್ ಮೊ- 98453-54052 ಹಾಗೂ ಈ. ಪ್ರಶಾಂತ್ ಮೊ- 81474-58468 ಇವರನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement