ದೇಶದ ಸುರಕ್ಷೆಗಾಗಿ ಮೋದಿ ಬೆಂಬಲಿಸಿ
ಕಡೂರು: ಭಾರತದ ಅಭಿವೃದ್ಧಿ ಹಾಗೂ ದೇಶದ ಸುರಕ್ಷತೆಗಾಗಿ ಮತದಾರರು ಮೋದಿಯವರ ಕೈ ಬಲಪಡಿಸಿ ಪ್ರಧಾನಿಯಾಗಲು ಮತ ನೀಡುವಂತೆ ಮಾಜಿ ಶಾಸಕ ಡಾ ವೈ.ಸಿ. ವಿಶ್ವನಾಥ್ ಮನವಿ ಮಾಡಿದರು.
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರ ಕಡೂರು ಪಟ್ಟಣದ ಹಲವು ವಾರ್ಡುಗಳು ಹಾಗು ವರ್ತಕರ ಅಂಗಡಿಗಳಿಗೆ ಭೇಟಿ ನೀಡಿ ಮತ ಯಾಚಿಸಿ ಮಾತನಾಡಿದರು.
ನಾನು ಶಾಸಕನಾದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕಡೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದು, ನೂರಾರು ಎಕರೆ ರೈತರ ಜಮೀನುಗಳ ಅಂರ್ಜಲ ಅಭಿವೃದ್ಧಿಗೆ 38 ಚೆಕ್ ಡ್ಯಾಂ ನಿರ್ಮಾಣ ಮಾಡಲಾಯಿತು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರ ದೇಶದ ಗಡಿ ಒತ್ತುವರಿ, ಮಹಿಳೆಯರಿಗೆ ಸುರಕ್ಷತೆ ಒದಗಿಸುವಲ್ಲಿ ಹಾಗೂ ಸೈನಿಕರ ಹಿತ ಕಾಪಾಡುವಲ್ಲೂ ವಿಫಲವಾಗಿ, ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದರು.
ನೀರಿಗೆ ತತ್ವಾರ: ನಗರ ಘಟಕದ ಅಧ್ಯಕ್ಷ ಎ.ಮಣಿ ಮಾತನಾಡಿ, ಬರಗಾಲದಿಂದ ಪಟ್ಟಣ ಸೇರಿದಂತೆ ತಾಲೂಕಿನ ಜನರಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದು, ಕಡೂರು ಪುರಸಭೆಯ ಕಾಂಗ್ರೆಸ್ ಆಡಳಿತವನ್ನು ಶಪಿಸುತ್ತಿದ್ದಾರೆ.
ಕೋಟೆ ಆನಂದ್, ಸುರೇಶ್, ರಾಮಿ, ಗಣೇಶ್, ರಾಜೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.