ಅಭ್ಯರ್ಥಿಗಳಿಗೆ ಅಡಕೆ ಪಾಠ: ಪ್ರಶ್ನಾವಳಿ ಸಿದ್ಧ
ಶಿವಮೊಗ್ಗ: ಅಡಕೆ ಬೆಳೆಗಾರರ ಸಂಕಷ್ಟಗಳ ಬಗ್ಗೆ ಚುನಾವಣಾ ಅಭ್ಯರ್ಥಿಗಳ ಗಮನ ಸೆಳೆಯಲು ಕೊಡಚಾದ್ರಿ ಜನವೇದಿಕೆ ಹಾಗೂ ಹಲವು ಸಂಸ್ಥೆಗಳು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಕೃಷಿ ವಿಜ್ಞಾನಿ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರ ತಾಂತ್ರಿಕ ಸಲಹೆಯೊಂದಿಗೆ ಪ್ರಶ್ನಾವಳಿ ಸಿದ್ಧಪಡಿಸಿದೆ. ಇದನ್ನು ಅಡಕೆ ಬೆಳೆಯುವ ಪ್ರದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಕಳುಹಿಸಿ ತಮ್ಮ ನಿಲವು ವ್ಯಕ್ತಪಡಿಸಲು ಆಗ್ರಹಿಸಿದೆ.
ಇದನ್ನು ಮತದಾರರನ್ನು ಜಾಗೃತಿಗೊಳಿಸಿ ಚುನಾವಣೆಯನ್ನು ಅರ್ಥಪೂರ್ಣಗೊಳಿಸುವ ಒಂದು ಪ್ರಯೋಗ ಎಂದು ಹೇಳಿಕೊಂಡಿರುವ ಆಯೋಜಕ ಸಂಘಟನೆಗಳು ಅಡಕೆ ಸಮಸ್ಯೆ ಬಗ್ಗೆ ಸ್ಪಂದಿಸುವಂತೆ ಅಭ್ಯರ್ಥಿಗಳನ್ನು ಒತ್ತಾಯಿಸಿವೆ. ನಗರದಲ್ಲಿ ಶನಿವಾರ ರೈತ ಮುಖಂಡ ಕಡಿದಾಳು ಶಾಮಣ್ಣ ಅವರು ಪ್ರಶ್ನಾವಳಿಯ ಹೊತ್ತಿಗೆಯನ್ನು ಬಿಡುಗಡೆ ಮಾಡಿ, ಎಲ್ಲಾ ಅಭ್ಯರ್ಥಿಗಳಿಗೂ ಅಡಕೆ ಸಮಸ್ಯೆ ಬಗ್ಗೆ ಪಾಠ ಮಾಡಬೇಕಿದೆ ಎಂದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಅಡಕೆಗೆ ಸಂಬಂಧಿಸಿದಂತೆ ಎಷ್ಟು ಕೆಲಸಮಾಗಬೇಕಿತ್ತೋ ಅಷ್ಟು ಕೆಲಸ ಸರ್ಕಾರಗಳಿಂದ ಆಗಿಲ್ಲ. ಏನೆಲ್ಲಾ ಪ್ರಯತ್ನ ಮಾಡಿದರೂ ಪೂರ್ಣ ಫಲ ಸಿಕ್ಕಿಲ್ಲ. ನಮ್ಮ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ. ಜತೆಗೆ ನಮ್ಮ ಪ್ರಶ್ನಾವಳಿಗೆ ಉತ್ತರಿಸುವಂತೆ ಅಭ್ಯರ್ಥಿಗಳನ್ನು ಒತ್ತಾಯಿಸುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ, ಬಿಜೆಪಿ ಮುಖಂಡ ಬಿ.ಆರ್. ಜಯಂತ್, ವರ್ತಕರ ಸಂಘದ ಕಡಿದಾಳು ಗೋಪಾಲ್, ರೈತಸಂಘದ ಮುಖಂಡ ಕೆ.ಟಿ. ಗಂಗಾಧರ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅಭ್ಯರ್ಥಿಗಳಿಗೆ ಪ್ರಶ್ನೆಗಳು
ದೇಶದ ಅರ್ಥ ವ್ಯವಸ್ಥೆಗೆ ಅಪಾರ ಕಾಣಿಕೆ ಕೊಡುತ್ತಿದ್ದರೂ ಅಡಕೆ ಬೆಳೆಗಾರರು ಏಕೆ ಸಂಕಷ್ಟದಲ್ಲಿದ್ದಾರೆ ?
ಅಡಕೆ ಮೇಲಿನ ಅವ್ಯಾಹತ ಅಪಪ್ರಚಾರದ ಹಿನ್ನಲೆ ಏನು ಇದನ್ನು ನಿರ್ಲಕ್ಷಿಸಿರುವುದು ಏಕೆ ?
ಈಗ ಚುನಾವಣಎ ದೃಷ್ಟಿಯಿಂದ ರಾಜಕೀಯ ಮಾಡುವು ದರಲ್ಲಿ ಏನಾದರೂ ಅರ್ಥವಿದೆಯೇ ?
ಅರಣ್ಯ ಮತ್ತು ಪರಿಸರ ವರದಿಗಳು ಏಕೆ ಅಡಕೆ ಬೆಳೆಗಾರರ ಪರವಾಗಿಲ್ಲ ?
ರೋಗಪೀಡಿತ ಅಡಕೆ ತೋಟಗಳಿಗೆ ವಿಶೇಷ ಪರಿಹಾರ ಪ್ಯಾಕೇಜು ಇನ್ನೂ ಮರೀಚಿಕೆಯಾಗಿದೆ ಏಕೆ ?
ಅಡಕೆಯ ಮೇಲೆ ಆಳವಾದ ಸಂಶೋಧನೆಗೆ ಇನ್ನೆಷ್ಟು ದಿನ ಕಾಯಬೇಕು?
ಅಡಕೆಗೆ ಒಂದು ಪ್ರತ್ಯೇಕ ಮಂಡಳಿ ಬೇಕೆನ್ನುವ ಬಹುದಿನಗಳ ಬೇಡಿಕೆ ಈಡೇರುವುದು ಎಂದು ?
ಶ್ರೇಷ್ಠ ನ್ಯಾಯಾಲಯದ ತೀರ್ಪು ಪ್ರತಿಕೂಲವಾಗಿ ಪರಿಣಮಿಸಿದರೆ ಪ್ರತಿಕ್ರಿಯೆ ಏನು ?
ಸಹಕಾರ ಸಂಘಗಳನ್ನು ಮುಕ್ತಗೊಳಿಸಲು ನಿಮ್ಮ ಚಿಂತನೆಗಳೇನು ?