ಜನಸಾಮಾನ್ಯರು ಮನಸ್ಸು ಮಾಡಿದರೆ ಭ್ರಷ್ಟಾಚಾರಕ್ಕೆ ಕಡಿವಾಣ
ಶಿವಮೊಗ್ಗ: ಕವಿಗಳು ಮಾನವ ಜನಾಂಗದ ಏಳಿಗೆ ಬಗ್ಗೆ ಕನಸು ಕಾಣುತ್ತಾ ಬಿತ್ತರಿಸುತ್ತಾರಾದರೂ ಅದನ್ನು ಸಾಕಾರಗೊಳಿಸುವ ಅಧಿಕಾರ ಅವರ ಬಳಿ ಇರುವುದಿಲ್ಲ. ಈ ತಾಕತ್ತು ರಾಜಕಾರಣಿಗಳ ಬಳಿ ಇದೆ. ಆದರೆ, ಸಾಕಾರಗೊಳಿಸುವ ಕನಸು ಅವರಿಗಿಲ್ಲ ಎಂದು ಲೇಖಕ ಸರ್ಜಾ ಶಂಕರ್ ಹರಳೀಮಠ ಹೇಳಿದರು.
ನಗರದಲ್ಲಿ ಸಮುದಾಯ ಸಂಸ್ಥೆ ಆಯೋಜಿಸಿದ್ದ ತಿಂಗಳ ಕಾರ್ಯಕ್ರಮದಲ್ಲಿ ಅವರು ಅರವಿಂದ ಕೇಜ್ರಿವಾಲ್ ಅವರು ರಚಿಸಿರುವ 'ಸ್ವರಾಜ್ಯ' ಕೃತಿಯ ಬಗ್ಗೆ ಮಾತನಾಡಿದರು.
ಕೇಜ್ರಿವಾಲ್ ಅವರು ಹೋರಾಟದಿಂದ ಹುಟ್ಟಿ ಬಂದ ಜನನಾಯಕ. 'ಸ್ವರಾಜ್ಯ' ಕೃತಿಯಲ್ಲಿ ಅವರು ಈ ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಅವರ ಕನಸು ಹಾಗೂ ಯಶಸ್ವಿ ಪ್ರಯೋಗಗಳನ್ನು ದಾಖಲಿಸಲಾಗಿದೆ. ಜನ ನಮ್ಮಿಂದೇನೂ ಆಗದು ಎಂಬ ಹತಾಶೆ ಬಿಟ್ಟು, ಪ್ರಯತ್ನಪಟ್ಟರೆ ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯವಿದೆ ಎಂದು ಅನೇಕ ಘಟನೆಗಳನ್ನು ಉದಾಹರಿಸುತ್ತಾರೆ ಎಂದರು.