ನಗರದಲ್ಲಿ ಪ್ರಸನ್ನ, ಗ್ರಾಮಾಂತರ ಭಂಡಾರಿ ಪ್ರಚಾರ
ಶಿವಮೊಗ್ಗ: ಕಾಂಗ್ರೆಸ್ ಚುನಾವಣಾ ಪ್ರಚಾರ ನಿಧಾನವಾಗಿ ಬಿರುಸು ಪಡೆಯುತ್ತಿದ್ದು, ಭಾನುವಾರದಂದು ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಶಿವಮೊಗ್ಗ ನಗರದಲ್ಲಿ ಪ್ರಚಾರ ನಡೆಸಿದರು.
ಮಂಜುನಾಥ ಭಂಡಾರಿಯವರು ಅಬ್ಬಲಗೆರೆ, ಕುಂಸಿ, ಆಯನೂರು, ಹಸೂಡಿ, ಯಡೇಹಳ್ಳಿ, ಆಗರದಹಳ್ಳಿ ಸೇರಿದಂತೆ ವಿವಿಧೆಡೆ ರೋಡ್ ಶೋ, ಪ್ರಚಾರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಹಾಜರಿದ್ದರು.
ಉದ್ಯೋಗ ಸೃಷ್ಟಿ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಮೂಲಕ ದೇಶದ ಎಲ್ಲಾ ಭಾಗದ ಗ್ರಾಮೀಣರಿಗೆ ಉದ್ಯೋಗ ಸೃಷ್ಟಿ ಮಾಡಿದೆ. ಇದರಿಂದಾಗಿ ರೈತಾಪಿ ವರ್ಗದ ಜನತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿದೆ. ಈ ಯೋಜನೆಯನ್ನು ವಿಶ್ವಸಂಸ್ಥೆಯೇ ಕೊಂಡಾಡಿದೆ. ಇಂತಹ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ರೈತವರ್ಗದ ಜನರ ಬೆಂಬಲ ಕಾಂಗ್ರೆಸ್ ಗಿದೆ ಎಂದರು.
ಶಿವಮೊಗ್ಗದಲ್ಲಿ: ಶಾಸಕ ಕೆ.ಬಿ. ಪ್ರಸನ್ನಕುಮಾರ್ ನಗರದ ವಿವಿಧೆಡೆ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿಶ್ವನಾಥ್ ಕಾಶಿ, ದೇವೇಂದ್ರಪ್ಪ ಸೇರಿದಂತೆ ಹಲವರು ಇದ್ದರು.