ರಿಪ್ಪನ್ಪೇಟೆಯಲ್ಲಿ ಬಿಎಸ್ವೈ ಪ್ರಚಾರ
ಸ್ವಿಸ್ ಬ್ಯಾಂಕ್ನ ಕಪ್ಪು ಹಣ ಬಡವರ ಅಭಿವೃದ್ಧಿಗೆ ಬಳಕೆ
ಹೊಸನಗರ: ದೇಶದಲ್ಲಿ ಬಿಜೆಪಿ ಗೆದ್ದು, ಮೋದಿ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕ್ನಲ್ಲಿ ಅಡಗಿಸಿರುವ ಕಪ್ಪುಹಣವನ್ನು ವಾಪಾಸು ತಂದು ದೇಶದ ಬಡಜನರ ಅಭಿವೃದ್ಧಿಗೆ ಬಳಸುವುದಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲೂಕಿನ ರಿಪ್ಪನ್ಪೇಟೆಯಲ್ಲಿ ಬಿಜೆಪಿಯವರು ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ದೇಶಕ್ಕೆ ಒಬ್ಬ ಸಮರ್ಥ ನಾಯಕನೆಂದರೆ ಮೋದಿ ಮಾತ್ರ ಎಂದು ಸಾಬೀತಾಗಿದೆ ಎಂದರು.
ಪಾಕಿಗಳ ಅಟ್ಟಹಾಸ: ದೇಶದಲ್ಲಿ ತಲೆ ಎತ್ತಿ ಒಬ್ಬ ಹೆಣ್ಣುಮಗಳು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ದೇಶದ ಗಡಿಭಾಗದಲ್ಲಿ ಪಾಕಿಸ್ಥಾನಿಗಳ ಅಟ್ಟಹಾಸದಿಂದಾಗಿ ಅಭದ್ರತೆ ಕಾಡುತ್ತಿದೆ. ಚೈನಾ ದೇಶ ದೇಶದ ಗಡಿಗೆ ನುಗ್ಗಿ ದಾಂಧಲೆಯಲ್ಲಿ ತೊಡಗಿದೆ. ಬಾಂಗ್ಲಾ ಮತ್ತು ಛತ್ತೀಸ್ಗಢದಲ್ಲಿ ನಕ್ಸಲ್ ಮತ್ತು ಭಯೋತ್ಪಾದನೆ ಕೃತ್ಯ ನಡೆದರೂ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸುವುದರೊಂದಿಗೆ ದುರ್ಬಲ ಪ್ರಧಾನಿ ಎಂದು ಸಾಬೀತು ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಜನರಲ್ ಬಜೆಟ್ ಹಾಗೂ ರೇಲ್ವೆ ಬಜೆಟ್ ಎಂದು 2 ಬಜೆಟ್ ಮಂಡಿಸಿದಂತೆ ರೈತರ ಪ್ರತ್ಯೇಕ ಬಜೆಟ್ ಮಂಡಿಸುವುದರ ಬಗ್ಗೆ ಚಿಂತನೆ ಇದೆ ಎಂದವರು ಹೇಲಿದರು.
ತಟಸ್ಥ ಪ್ರಧಾನಿ: ಯುದ್ದ ಕಾಲದಲ್ಲಿ ಸೇನಾಧಿಪತಿಯೇ ಓಡಿಹೋದ ಸ್ಥಿತಿ ಕಾಂಗ್ರೆಸಿನದು. ಕೇಂದ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ತಟಸ್ಥರಾಗಿದ್ದಾರೆ. ರಾಹುಲ್ ಗಾಂಧಿ ಅತಂತ್ರದಲ್ಲಿದ್ದು, ಸೋನಿಯಾ ಗಾಂಧಿ ಬೇಡವೇ ಬೇಡ ಎಂದು ಮೊದಲೇ ಆ ಪಕ್ಷದ ಸೋಲು ಒಪ್ಪಿಕೊಂಡಿದ್ದಾರೆ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಮರ್ಥ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿಯನ್ನು ದೇಶದ ಜನತೆ ನೋಡುತ್ತಿದ್ದಾರೆಂದರು.
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಹರತಾಳು ಹಾಲಪ್ಪ ಮಾತನಾಡಿದರು.
ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್, ಕೆ.ವಿ. ಕೃಷ್ಣಮೂರ್ತಿ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಎನ್.ಆರ್. ದೇವಾನಂದ್, ಬೆಳ್ಳೂರು ತಿಮ್ಮಪ್ಪ, ಬಂಡಿ ದಿನೇಶ್, ಶುಭಾ ಕೃಷ್ಣಮೂರ್ತಿ, ನಾಗರತ್ನ ದೇವರಾಜ್, ವೀರೇಶ್ ಅಲುವಳ್ಳಿ, ಶಾಂತಾ ಶೇಖರಪ್ಪ, ನಿರ್ಮಲ ಗಣೇಶ್, ಜಯಂತಿ ಭಾಸ್ಕರ್, ಬಿ. ಯುವರಾಜ್, ಬಿ.ಆರ್. ಜಯಂತ್, ಆರ್. ರಾಘವೇಂದ್ರ, ತ.ಮ. ನರಸಿಂಹ, ಎಂ.ಬಿ. ಮಂಜುನಾಥ್, ಸುರೇಶಿ ಸಿಂಗ್, ಎಚ್.ಆರ್. ದೇವೇಂದ್ರಪ್ಪ ಗೌಡ, ತರಕಾರಿ ಯೋಗೇಂದ್ರ ಗೌಡ, ಗಿರೀಶ ಜಂಬಳ್ಳಿ ಮತ್ತಿತರರು ಹಾಜರಿದ್ದರು.