ರೈತಪರ ಕಾಳಜಿ ಉಳ್ಳವರನ್ನು ಆಯ್ಕೆಮಾಡಿ
ಸಾಗರ: ಈ ಚುನಾವಣೆಯಲ್ಲಿ ಜಿಲ್ಲೆಯ ಅಡಕೆ ಬೆಳೆಗಾರರು ರೈತಪರ ಕಾಳಜಿ ಹಾಗೂ ರೈತರ ಸಮಸ್ಯೆ ಬಗ್ಗೆ ಸಮಗ್ರ ಮಾಹಿತಿ ಇರುವವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಡಕೆ ಬೆಳೆಗಾರರ ಮೇಲೆ ಅಡಕೆ ಬೆಳೆ ನಿಷೇಧ ಎಂಬ ಕತ್ತಿ ತೂಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಅಡಕೆ ಬೆಳೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಫಿಡವಿಟ್ ಸಲ್ಲಿಸಿದೆ ಎಂದು ಕೇಂದ್ರದ ಸಾಲಿಸಿಟರ್ ಜನರಲ್ ಸ್ಪಷ್ಟಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಡಕೆ ಬೆಳೆಗಾರರ ಪರವಾಗಿ ಸಂಸತ್ತಿನಲ್ಲಿ ಸಮರ್ಥವಾಗಿ ವಾದ ಮಂಡಿಸುವ ಶಕ್ತಿ ಇರುವುದು ಯಡಿಯೂರಪ್ಪ ಅವರಿಗೆ ಮಾತ್ರ ಎಂದರು.
ಬಿಎಸ್ವೈ ಬೇಕಾಗಿದೆ: ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ ಹಿಂದಕ್ಕೆ ಪಡೆಯುವಂತೆ ಮಾಡಬೇಕಾಗಿದೆ. ಇದರಿಂದ ನಮ್ಮ ಸಾಂಪ್ರದಾಯಿಕ ಅಡಕೆ ಬೆಳೆ ಉಳಿಸಿಕೊಳ್ಳಬಹುದು. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದರೆ ಈ ಕೆಲಸವನ್ನು ಯಡಿಯೂರಪ್ಪ ಅವರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಆದ್ದರಿಂದ ಬೆಳೆಗಾರ ಬಂಧುಗಳು ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿ ಕಳಿಸುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಡಕೆಗೆ ಕೊಳೆರೋಗ ಬಂದಿದ್ದಾಗ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಿಲ್ಲ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಅಲ್ಪಸ್ವಲ್ಪ ಪ್ರಯತ್ನ ಪಟ್ಟರೂ ಪೂರ್ಣ ಪ್ರಮಾಣದಲ್ಲಿ ಬೆಳೆಗಾರರಿಗೆ ಆದ ಹಾನಿಯನ್ನು ತುಂಬಿಸಿಕೊಡುವಲ್ಲಿ ಅವರಿಂದಲೂ ಸಾಧ್ಯವಾಗಿಲ್ಲ.
ಮುಖ್ಯಮಂತ್ರಿಗಳು ಕೊಳೆರೋಗದಿಂದ ಹಾನಿಯಾದ ತೋಟಗಳಿಗೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಳೆರೋಗದಿಂದ ಪೂರ್ಣ ಅಡಕೆ ಕಳೆದುಕೊಂಡ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಪಕ್ಷಾಂತರ...: ಕಾಂಗ್ರೆಸಿನವರು ಪಕ್ಷಾಂತರ ವಿಷಯವನ್ನು ಪ್ರಸ್ತಾಪ ಮಾಡುವುದಾದರೆ ತಮ್ಮ ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸಲಿ. ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಾಂತರದಲ್ಲಿ ಎತ್ತಿದ ಕೈ. ಹಿಂದೆ ಜನತಾದಳದಲ್ಲಿದ್ದಾಗ ಕಾಂಗ್ರೆಸಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದರು. ಕಾಂಗ್ರೆಸಿಗೆ ಬಂದ ಮೇಲೆ ದೇವೇಗೌಡರ ಕುಟುಂಬದ ದಾಖಲೆಗಳು ನನ್ನ ಬಳಿ ಇದೆ ಎನ್ನುತ್ತಿದ್ದಾರೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲಿದೆ. ಮುಖ್ಯಮಂತ್ರಿ ಸ್ಥಾನ ಹೋಯಿತು ಎಂದು ಸಿದ್ದರಾಮಯ್ಯ ಬೇರೆ ಪಕ್ಷ ನೋಡುವುದು ಅನಿವಾರ್ಯವಾಗುತ್ತದೆ. ಈಗಾಗಲೇ ಕಾಂಗ್ರೆಸಿನಲ್ಲಿ ಭಿನ್ನಮತ ಪ್ರಾರಂಭವಾಗಿದ್ದು, ಮುಖ್ಯಮಂತ್ರಿಗಳ ವಿರುದ್ಧ ಸ್ವತಃ ಅವರ ಪಕ್ಷದ ಅಧ್ಯಕ್ಷರೇ ಟೀಕೆ ಮಾಡುತ್ತಿದ್ದಾರೆ. ತಮ್ಮ ಪಕ್ಷದಲ್ಲಿರುವ ಪಕ್ಷಾಂತರಿಗಳ ಬಗ್ಗೆ ಮಾತನಾಡಲಾಗದ ಕಾಂಗ್ರೆಸ್ ಮುಖಂಡರು ಬಿಜೆಪಿಯತ್ತ ಕೈತೋರಿಸುತ್ತಿರುವುದು ಹಾಸ್ಯಸ್ಪದ ಎಂದರು. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಪ್ರಮುಖರಾದ ಬಿ.ಆರ್. ಜಯಂತ್, ಟಿ.ಡಿ. ಮೇಘರಾಜ್, ಚೇತನರಾಜ್ ಕಣ್ಣೂರು, ಸತೀಶಬಾಬು, ಎಸ್.ಎಲ್. ಮಂಜುನಾಥ್, ಕೆ. ಅರುಣಪ್ರಸಾದ್ ಹಾಜರಿದ್ದರು.