ಶೆಟ್ಟರ್ ಕ್ಷಮಾಪಣೆ ಕೋರಲು ಆಗ್ರಹ
ಶಿವಮೊಗ್ಗ: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳಾದ ಡಾ. ಯು.ಆರ್. ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಅವರನ್ನು ನಕ್ಸಲ್ ವಾದಿಗಳು ಎಂಬ ಸುಳ್ಳು ಹಣೆಪಟ್ಟಿಕಟ್ಟಿ ಬೇಜವಾಬ್ದಾರಿ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರು ಈ ಇಬ್ಬರು ಸಾಹಿತಿಗಳ ಕ್ಷಮೆಯಾಚಿಸಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಕಲ್ಲೂರು ಮೇಘರಾಜ್ ಒತ್ತಾಯಿಸಿದ್ದಾರೆ.
ಡಾ. ಯ.ಆರ್. ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಕರ್ನಾಟಕ ರಾಜ್ಯದಾದ್ಯಂತ ಲಕ್ಷಾಂತರ ಪ್ರಜ್ಞಾವಂತರ ಮನದಾಳದಲ್ಲಿ ತಮ್ಮ ವೈಚಾರಿಕತೆ ಮತ್ತು ಸಾಹಿತ್ಯದ ಸೊಗಡನ್ನು ಬೀರಿರುತ್ತಾರೆ. ರಾಜ್ಯದಲ್ಲಿ ಅಹಿಂಸಾತ್ಮಕವಾಗಿ ಹಾಗೂ ಜಾತ್ಯತೀತವಾಗಿ ಸರ್ವಧರ್ಮದವರೂ ಹಾಗೂ ಸರ್ವ ಜಾತಿಯವರೂ ಒಂದಾಗಿ ಬಾಳಲು ಇವರುಗಳ ಸಾಹಿತ್ಯ ಮತ್ತು ವಿಚಾರಗಳು ಕಾರಣವಾಗಿವೆ ಎಂದಿದ್ದಾರೆ.
ಸಾಹಿತ್ಯ ಕೃಷಿ ಒಂದು ಅಪೂರ್ವ ಮತ್ತು ಗಣನೀಯ ಸಮಾಜ ಸೇವೆಯಾಗಿದೆ. ಇದ್ಯಾವುದನ್ನೂ ಲೆಕ್ಕಿಸದೇ ಜಗದೀಶ್ ಶೆಟ್ಟರ್ ಅವರು ಭ್ರಮನಿರಸನಗೊಂಡು ಡಾ. ಅನಂತಮೂರ್ತಿ ಮತ್ತು ಕಾರ್ನಾಡರ ಮೇಲೆ ನಕ್ಸಲ್ ವಾದಿಗಳು ಎಂಬ ನಿರಾಧಾರ ಹಾಗೂ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿರುತ್ತಾರೆ ಎಂದು ಅವರು ಖಂಡಿಸಿದ್ದಾರೆ.