ಜನಲೋಕಪಾಲ್ ಜಾರಿಯಾಗಲಿ
ಶಿವಮೊಗ್ಗ: ಭಾರತ ಗೆಲ್ಲಬೇಕೆಂದರೆ ಜನಲೋಕಪಾಲ್ ಮಸೂದೆ ಜಾರಿಯಾಗಬೇಕು. ಆದರೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಬೇರೆ ಯಾವ ಪಕ್ಷಗಳಿಗೂ ಈ ಬಗ್ಗೆ ಆಸಕ್ತಿ ಇಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶ್ರೀಧರ ಕಲ್ಲಹಳ್ಳ ಹೇಳಿದರು.
ನಗರದಲ್ಲಿ ಸೋಮವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು, ಈ ಮಸೂದೆಗಾಗಿ 100 ಬಾರಿ ಬೇಕಾದರೂ ಮುಖ್ಯಮಂತ್ರಿ ಸ್ಥಾನ ಬಿಡುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಈ ಮಸೂದೆ ಜಾರಿ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ ಎಂದರು.
ಮೀಸಲು ಸಿಗದವರಿಗೆ ಸಿಗಲಿ: ಮೀಸಲಾತಿ ಬಗ್ಗೆ ಆಮ್ ಆದ್ಮಿ ನಿಲವು ಸ್ಪಷ್ಟ. ಈಗಾಗಲೇ ಮೂರು ತಲೆಮಾರುಗಳ ಕಾಲ ಮೀಸಲು ಸೌಲಭ್ಯ ಪಡೆದವರಿಗೆ ಮುಂದುವರಿಸುವ ಅಗತ್ಯ ಇಲ್ಲ. ಯಾರಿಗೆ ಸಿಕ್ಕಿಲ್ಲವೋ ಅವರಿಗೆ ಮೀಸಲು ಸಿಗಬೇಕು. ಇದರ ಜತೆಗೆ ಚಾರಿತ್ರಿಕ ಮೌಲ್ಯಗಳನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ತಿಳಿಸಿದರು. ಆಮ್ ಆದ್ಮಿ ಪಕ್ಷ ಹೊಸ ಆಶಾಕಿರಣವಾಗಿ ಮುಂದೆ ಬಂದಿದೆ ಎಂದ ಅವರು, ಕೃಷಿಕರಿಗೆ, ಬದುಕಿಗೆ ಪೂರಕವಾದ ಶಿಕ್ಷಣ ಬೇಕಾಗಿದೆ. ಹಾಗಾಗಿ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಬೇಕಾಗದ ಅಗತ್ಯವಿದೆ. ಶಿವಮೊಗ್ಗದಲ್ಲಿ ಮೆಡಿಕಲ್ ಟೂರಿಸಂ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಔಷಧ ಸಸ್ಯಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರಕೃತಿಗೆ ಪೂರಕವಾದ ಅಭಿವೃದ್ಧಿ ಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖರಾದ ಸಿದ್ದಾರ್ಥ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್, ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ ಇದ್ದರು.