ಬಿಎಸ್ವೈಗೆ ಮತ ಕೊಟ್ರೆ ಮೋದಿಗೇ ಕೊಟ್ಟಂತೆ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಏ.7
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ವ್ಯಕ್ತಿ ಎಂದು ಈ ಬಾರಿ ನೀವು ಓಟು ಹಾಕಿದರೆ ನರೇಂದ್ರ ಮೋದಿಗೆ ಮತ ಹಾಕಿದಂತಾಗುತ್ತದೆ. ಒಂದು ವೇಳೆ ಓಟು ಹಾಕದೆ ಬಿಟ್ಟರೆ ಅದು ಸಹ ಮೋದಿಗೆ ಲಾಭ ಆದ್ದರಿಂದ ಎಚ್ಚರಿಕೆಯಿಂದ ಮತ ಹಾಕಬೇಕಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಜಮೀರ್ ಅಹಮದ್ ಹೇಳಿದರು.
ಪಟ್ಟಣ ಮತ್ತು ಹತ್ತಿರದ ಚಿಕ್ಕಜಂಬೂರ ಗ್ರಾಮದಲ್ಲಿ ಮುಸ್ಲಿಂ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದುವೇಳೆ ಈ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುತ್ತಿದ್ದೆವು, ಈ ಬಾರಿ ಅಭ್ಯರ್ಥಿ ಬದಲಿಸುವುದು ಹೇಗೆ ಎಂದು ಯೋಚಿಸಬೇಡಿ. ಮತ ಒಡೆದರೆ ಮೋದಿಗೆ ಮತ ಹಾಕಿದಂತಾಗುತ್ತದೆ ಎಂದು ಎಚ್ಚರಿಸಿದರು.
ತೃತೀಯ ರಂಗ ಅಧಿಕಾರಕ್ಕೆ: ಬಿ.ಎಸ್.ಯಡಿಯೂರಪ್ಪ ಸಿಎಂ ಆದಾಗ ಸಾಕಷ್ಟು ಕೆಲಸ ಕಾರ್ಯ ಮಾಡಿಕೊಟ್ಟಿರುವುದು ಗೊತ್ತಿದೆ. ಆದರೆ, ಈ ಮಹಾ ಚುನಾವಣೆ ಬಿಎಸ್ವೈ ಅವರ ಚುನಾವಣೆ ಎಂದು ತಿಳಿಯದೇ ಮೋದಿ ಚುನಾವಣೆ ಎಂದು ತಿಳಿದು ಮತ ಹಾಕಬೇಕಿದೆ. ಬಿಎಸ್ವೈ ಮುಖ್ಯಮಂತ್ರಿ ಆದದ್ದು ಜೆಡಿಎಸ್ನಿಂದ ಎಂಬುದನ್ನು ನೀವು ತಿಳಿಯಬೇಕು. ಜೆಡಿಎಸ್ ಈ ಹಿಂದೆ ಬಿಜೆಪಿಗೆ ಬೆಂಬಲ ಕೊಡುವ ಮೊದಲು ಫಲ ಬಿಡದ ಮರದಂತಿತ್ತು. ಆದರೆ, ಜೆಡಿಎಸ್ ಬೆಂಬಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಫಲ ಬಿಡುವ ಮರವಾಗಿ ಬೆಳೆಯಿತು ಎಂದ ಅವರು, ಈ ಬಾರಿ ದೇಶದಲ್ಲಿ ತೃತೀಯರಂಗ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ 100ರ ಗಡಿ ದಾಟುವುದಿಲ್ಲ ಎಂದು ಅರಿತು ತ್ರತೀಯ ರಂಗಕ್ಕೆ ಬೆಂಬಲ ಕೊಡಲಿದೆ ಎಂದರು.
ಕಾಂಗ್ರೆಸ್ಗೇ ಮುಳುವಾಯ್ತು: ರಾಜ್ಯದಲ್ಲಿ ಜೆಡಿಎಸ್ 14-15 ಸ್ಥಳಗಳಲ್ಲಿ ಗೆಲ್ಲುವ ಅವಕಾಶವಿದೆ. ಇಂತಹ ಸಂದರ್ಭದಲ್ಲಿ ನಮ್ಮ ಓಟುಗಳು ಒಡೆಯದಂತೆ ನೋಡಿಕೊಳ್ಳಬೇಕಿದೆ. ಗುಜರಾತ್ ರಾಜ್ಯದಲ್ಲಿ 3ನೇ ಬಾರಿಗೆ ಮೋದಿ ಮುಖ್ಯಮಂತ್ರಿ ಆಗಲೂ ಸಹ ಕಾಂಗ್ರೆಸ್ ಪಕ್ಷ ಕಾರಣ ಮೋದಿ ಮುಖ್ಯಮಂತ್ರಿ ಆದರೆ, ದೇಶದ ರಾಜಕಾರಣಕ್ಕೆ ಬರಲಾರರು ಎಂದು ಭಾವಿಸಿದ್ದ ಕಾಂಗ್ರೆಸ್ಗೆ ಅದೇ ಮುಳುವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮರೆಯಾಗಲಿದೆ. ಇಲ್ಲಿಯೂ ಜೆಡಿಎಸ್ ಪ್ರಬಲ ಪೈಪೋಟಿ ನೀಡಲಿದೆ. ಎಲ್ಲರೂ ಜೆಡಿಎಸ್ ಬೆಂಬಲಿಸಿ, ಜಮೀರ್ ಅಹಮದ್ ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ತಲೆ ತಗ್ಗಿಸಲು ಬಿಡುವುದಿಲ್ಲ ಎಂದರು.
ಮುಖಂಡ ಬಳಗಾರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಗಜೇಂದ್ರ, ರಾಜ್ಯ ನಾಯಕ ರಾಜ್ ಶಕೀಲ ಅಹಮದ್, ಜಿಲ್ಲಾ ಮುಖಂಡ ಹಿರೇಜಂಬೂರ್ ಚಂದ್ರಣ್ಣ, ಶಿರಾಳಕೊಪ್ಪ ಘಟಕದ ಅಧ್ಯಕ್ಷ ಫರ್ವೀದ್ ಅಹಮದ್, ಮಕಬುಲ್ ಸಾಬ್ ಹಾಗೂ ಇತರರು ವೇದಿಕೆ ಮೇಲಿದ್ದರು.