ಹಣ ಹಂಚಿಕೆ ತಡೆಗೆ 'ಗುಪ್ತಚರ'
ವಿಶೇಷ ವರದಿ
ಶಿವಮೊಗ್ಗ: ಈ ಲೋಕಸಭಾ ಚುನಾವಣೆಯಲ್ಲಿ ಮತದಾರರ ಕೈ ಬೆಚ್ಚಗೆ ಮಾಡಿ ಮತ ಖರೀದಿಸಬಹುದೆಂಬ ಕಲ್ಪನೆಯಲ್ಲಿರುವ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಇದೆ.
ವೆಚ್ಚ ನಿಯಂತ್ರಣದ ಮೂಲಕ ಅಭ್ಯರ್ಥಿಗಳನ್ನು ಒಂದು ಹಂತದವರೆಗೆ ನಿಯಂತ್ರಿಸಿರುವ ಚುನಾವಣಾ ಆಯೋಗ ಈಗ ಒಂದು ಹೆಜ್ಜೆ ಮುಂದೆ ಹೋಗಿ ಮತದಾನಕ್ಕೆ ಮುನ್ನ ಹಣ ಹಾಗೂ ಸಾಮಗ್ರಿ ಹಂಚುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗುಪ್ತಚರ ತಂಡ ರಚಿಸಲು ಸೂಚಿಸಿದೆ.
ತಂಡದಲ್ಲಿ ಯಾರ್ಯಾರು?: ತಂಡದಲ್ಲಿರುವವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ನಿರ್ವಹಿಸಲಿದ್ದಾರೆ. ಶಾಂತಿ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಹಕಾರ ನೀಡಿದ ತೃಪ್ತಿಯಷ್ಟೇ ಇವರಿಗೆ ಸಲ್ಲುವ ಲಾಭ.
ತಂಡದಲ್ಲಿ ನಿವೃತ್ತ ಸರ್ಕಾರಿ ನೌಕರರು, ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ನಿವೃತ್ತ ಅಧಿಕಾರಿಗಳು, ಕಾರ್ಪೊರೇಟ್ ಕಂಪನಿಗಳ ಅಧಿಕಾರಿಗಳು, ಸಾರ್ವಜನಿಕ ಸಂಘ ಸಂಸ್ಥೆಗಳ ಮುಖಂಡರು, ಸಭ್ಯ ಪತ್ರಕರ್ತರು, ವಿದ್ಯಾರ್ಥಿಗಳು, ಎನ್ಎಸ್ಎಸ್, ಎಸಿಸಿ ಕೆಡೆಟ್, ನಿವೃತ್ತ ಸೈನಿಕರು ತಂಡದ ಸದಸ್ಯರಾಗಬಹುದು. ಹಾಗೆಯೇ ಇವರು ಯಾವುದೇ ರಾಜಕೀಯ ಪಕ್ಷದಲ್ಲಿ ಸಂಯೋಜನೆ ಹೊಂದಿರಬಾರದು. ಅಭ್ಯರ್ಥಿಗಳು, ಪಕ್ಷದ ಚುನಾವಣಾ ಏಜೆಂಟರ ರಕ್ತ ಸಂಬಂಧಿ, ಕುಟುಂಬದವರಾಗಿರಲೇಬಾರದು.
ಚುನಾವಣಾ ಸೆಕ್ಟರ್ ಆಫೀಸರ್ ಅಥವಾ ಪೊಲೀಸ್ ಅಧಿಕಾರಿಗಳು ಈ ವ್ಯಕ್ತಿಗಳನ್ನು ಗುರುತಿಸಿ ತಂಡ ರಚಿಸುತ್ತಾರೆ. ತಂಡದ ಸದಸ್ಯರ ವಿವರಗಳು ಚುನಾವಣಾ ದೂರು ಸ್ವೀಕಾರ ಕೇಂದ್ರ, ರಿಟರ್ನಿಂಗ್ ಅಧಿಕಾರಿಗಳ ಬಳಿ ಇರುತ್ತದೆ.
ತಂಡದ ಕಾರ್ಯನಿರ್ವಹಣೆ: ಈ ತಂಡವು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತದೆ. ಈ ಕಾರ್ಯ ಮೇಲ್ನೋಟಕ್ಕೆ ಕಂಡುಬಂದರೂ ತಂಡದ ಪ್ರಮುಖ ಕಾರ್ಯನಿರ್ವಹಣೆ ನ್ಯಾಯಸಮ್ಮತ ಚುನಾವಣೆಗೆ ಸಹಕಾರ ನೀಡುವ ಗುಪ್ತಚರ ಕೆಲಸ ಮಾಡುವುದು.
ಮತದಾನಕ್ಕೆ ಮುನ್ನ ಮತದಾರರ ಓಲೈಕೆಗಾಗಿ ನಡೆಯುವ ಹಣ ಹಂಚಿಕೆ, ವಸ್ತು ಹಂಚಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಚುನಾವಣಾ ಅಧಿಕಾರಿಗಳಿಗೆ ತಿಳಿಸುತ್ತದೆ. ಅಲ್ಲದೆ, ನೀತಿ ಸಂಹಿತೆ ಉಲ್ಲಂಘನೆಯ ವಿವಿಧ ಮಾರ್ಗ ಕಂಡು ಹಿಡಿದು ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸುತ್ತದೆ. ವೆಬ್ಸೈಟ್, ಸಾಮಾಜಿಕ ತಾಣಗಳನ್ನು ಈ ತಂಡಗಳು ಗಮನಿಸುತ್ತಿರುತ್ತವೆ. ಚುನಾವಣಾ ಹಿನ್ನೆಲೆಯಲ್ಲಿ ಅಪ್ಲೋಡ್ ಮಾಡಲಾದ ನೀತಿ ಸಂಹಿತೆ ಉಲ್ಲಂಘಿಸುವ ಫೋಟೊ, ವಿಡಿಯೋ, ಆಡಿಯೋಗಳ ಮೇಲೆ ಕಣ್ಣಿಟ್ಟಿರುತ್ತದೆ.
ವಿಶೇಷವೆಂದರೆ ಈ ತಂಡಕ್ಕೆ ಕ್ರಮ ಕೈಗೊಳ್ಳುವ ಯಾವುದೇ ಅಧಿಕಾರ ನೀಡಲಾಗಿಲ್ಲ. ಕೇವಲ ಮಾಹಿತಿ ಸಂಗ್ರಹ ಮತ್ತು ರವಾನೆಗಷ್ಟೇ ಅವಕಾಶ. ಆಯೋಗದ ಈ ನಿರ್ಧಾರದಿಂದಾಗಿ ಅಭ್ಯರ್ಥಿಗಳನ್ನು ಹಂತ- ಹಂತವಾಗಿ ಕಟ್ಟಿ ಹಾಕುತ್ತಿರುವ ಚುನಾವಣಾ ಆಯೋಗ ಈಗ ನೇರವಾಗಿ ಅಖಾಡಕ್ಕಿಳಿದಿದೆ ಎಂದೇ ಹೇಳಬಹುದು. ಒಟ್ಟಾರೆ ಸಾರ್ವಜನಿಕರು, ಸಂಘ- ಸಂಸ್ಥೆಗಳ ಸದಸ್ಯರನ್ನು ಬಳಸಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಹತ್ತಿಕ್ಕುವ ಮಹತ್ವದ ಕಾರ್ಯಕ್ಕೆ ಆಯೋಗ ಮುಂದಾಗಿದೆ.
ಏನಿದು ತಂಡ?
ಈ ಹಿಂದಿನ ಚುನಾವಣೆಯಲ್ಲಿ ಮತದಾರರ ಓಲೈಕೆಗೆ ಅತಿ ಹೆಚ್ಚು ಹಣ ಮತ್ತು ವಸ್ತು ವಿತರಣೆಯಾದ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿ ಈ ತಂಡಗಳು ಕಾರ್ಯನಿರ್ವಹಿಸಲಿದೆ. ವಾರ್ಡ್ ಜಾಗೃತಿ ಸಮಿತಿ, ಗ್ರಾಮೀಣ ಜಾಗೃತಿ ಸಮಿತಿ ಎಂದು ಎರಡು ರೀತಿಯ ತಂಡ ರಚನೆಯಾಗುತ್ತಿದೆ. ಸದ್ಯಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಜಾಗೃತ ತಂಡಗಳು ಕಾರ್ಯನಿರ್ವಹಿಸಲಿವೆ. ಪ್ರತಿ ತಂಡದಲ್ಲಿ ಕನಿಷ್ಠ 5 ಗರಿಷ್ಠ 10 ಸದಸ್ಯರಿರುತ್ತಾರೆ. ಇವರ ಪೈಕಿ ಇಬ್ಬರು ಮಹಿಳೆಯರಿರುತ್ತಾರೆ.