ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಲಾವಿದರ ಬಗ್ಗೆ ಅವಹೇಳನಕಾರಿ ಮಾತು ಸಲ್ಲ

Mainashree
Updated On : 10 Apr 2014, 11:02 am

ಶಿವಮೊಗ್ಗ: ಕಲಾವಿದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಕೆಟ್ಟ ಪರಿಣಾಮ ಬೀರುತ್ತದೆ. ಯಾರ ಕುರಿತೂ ಅವಹೇಳನ ಮಾಡಬಾರದು ಎಂದು ಚಿತ್ರನಟ ಯೋಗೀಶ್ ಹೇಳಿದರು.
ಶಿವರಾಜಕುಮಾರ್ ಅವರ ಮೇಲಿನ ಅಭಿಮಾನದಿಂದಲೇ ಜೆಡಿಎಸ್ ಅಭ್ಯರ್ಥಿ ಗೀತಾ ಅವರ ಪರ ಪ್ರಚಾರಕ್ಕೆ ಬಂದಿರುವುದಾಗಿ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆಯನೂರು ಮಂಜುನಾಥ್ ಮಾತಿಗೆ ತಿರುಗೇಟು ನೀಡಿದರು.
ಎಂಜಿಆರ್, ಎನ್‌ಟಿಆರ್, ಜಯಲಲಿತಾ ಸೇರಿದಂತೆ ಹಲವರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಬಿಜೆಪಿಯಲ್ಲಿಯೂ ಚಿತ್ರನಟರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವಹೇಳಕಾರಿ ಮಾತುಗಳು ಒಳ್ಳೆಯದಲ್ಲ ಎಂದು ಹೇಳಿದರು.
ಎಲ್ಲ ಪಕ್ಷಗಳಲ್ಲೂ ಚಿತ್ರರಂಗದವರು ಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆಯೂ ಹೀಗೆಯೇ ಮಾತನಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಚಿತ್ರರಂಗದವರು ರಾಜಕೀಯಕ್ಕೆ ಬಂದರೆ ಒಳ್ಳೆಯ ಕೆಲಸ ಮಾಡುವುದಿಲ್ಲ ಎನ್ನುವುದು ತಪ್ಪು ಎಂದರು.
ಗೀತಕ್ಕರಿಗೆ ಮತ: ಶಿವಣ್ಣನ ಮೂರನೇ ಕಣ್ಣಿನಂತೆ ಚಿತ್ರರಂಗದವರಾದ ನಾವು ಸಹಕಾರ ನೀಡಲಿದ್ದೇವೆ ಎಂದ ಅವರು, ನನಗೆ ಈ ಕ್ಷೇತ್ರದಲ್ಲಿ ಮತದಾನ ಮಾಡುವ ಹಕ್ಕು ಇದ್ದಿದ್ದರೆ ಖಂಡಿತಾ ಗೀತಕ್ಕರಿಗೆ ಮತ ನೀಡುತ್ತಿದ್ದೆ. ನಿಜವಾಗಿಯೂ ಅವರು ಒಳ್ಳೆಯ ಅಭ್ಯರ್ಥಿ ಎಂದು ಅಭಿಪ್ರಾಯಪಟ್ಟರು.
ಗೀತಾ ಶಿವರಾಜಕುಮಾರ್ ಅವರು ರಾಜಕೀಯ ಹಿನ್ನೆಲೆಯಿಂದ ಬಂದವರು. ಕಲಾವಿದರ ಕುಟುಂಬಕ್ಕೆ ಸೇರಿದವರು. ಇಂಥವರಿಂದ ಹೊಸತನ್ನು ನಿರೀಕ್ಷೆ ಮಾಡುವುದು ಸಹಜ. ಈ ಕಾರಣಕ್ಕಾಗಿಯೇ ಗೀತಾ ಅವರನ್ನು ಬೆಂಬಲಿಸಲು ಬಂದಿದ್ದೇವೆ.
ವೈಯಕ್ತಿಕವಾಗಿ ರಾಜಕಾರಣಿಗಳ ಸಂಪರ್ಕ ಇದೆಯಾದರೂ ಸದ್ಯಕ್ಕೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ರಾಜಕೀಯಕ್ಕೆ ಬರಲು ನಾನಿನ್ನೂ ಚಿಕ್ಕವನು. ಮುಂದೆ ನೋಡೋಣ ಎಂದರು.
ಚಿತ್ರನಟಿ ಅಮೂಲ್ಯ, ನನಗೆ ಗೀತಕ್ಕ ಗೊತ್ತು. ಅವರ ಎದುರು ಯಾರ್ಯಾರು ನಿಂತಿದ್ದಾರೆ ಎಂಬುದು ಗೊತ್ತಿಲ್ಲ. ಶಿವಣ್ಣ- ಗೀತಕ್ಕರ ಅಭಿಮಾನದ ಮೇಲೆ ಪ್ರಚಾರಕ್ಕೆ ಬಂದಿದ್ದೇನೆ. ದಯಮಾಡಿ ಗೀತಕ್ಕಂಗೆ ಓಟು ಕೊಡಿ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಇದು ನನ್ನ ಎರಡನೇ ಚುನಾವಣೆ. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅದನ್ನು ಗೀತಕ್ಕ ಮುಂದುವರಿಸುತ್ತಾರೆ ಎಂದರು.
ನಗರ ಪಾಲಿಕೆ ಉಪ ಮೇಯರ್ ರೇಖಾ ಚಂದ್ರಶೇಖರ್, ಸದಸ್ಯರಾದ ನಾಗರಾಜ ಕಂಕಾರಿ, ಪಾಲಾಕ್ಷಿ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಜೆ.ಡಿ. ಮಂಜುನಾಥ್ ಸೇರಿದಂತೆ ಹಲವರು ಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement