ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಂಗಾರಪ್ಪ ರಾಜ್ಯದ ಆಸ್ತಿ: ಬೇಳೂರು

Mainashree
Updated On : 10 Apr 2014, 11:02 am

ಸಾಗರ: ಹಿರಿಯ ಮುತ್ಸದ್ಧಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರಾಜ್ಯದ ಆಸ್ತಿ. ಕುಟುಂಬವೊಂದರ ಅಣ್ಣ, ತಮ್ಮ, ತಂಗಿಯ ಆಸ್ತಿಯಲ್ಲ. ಚುನಾವಣೆ ಸಂದರ್ಭದಲ್ಲಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಜೆಡಿಎಸ್ ಬಿಡಬೇಕು ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ತಾಲೂಕಿನ ಆನಂದಪುರಂ ಹೋಬಳಿಯ ಕಾಸ್ಪಾಡಿ, ಐಗಿನಬೈಲ್, ಜೇಡಿಸರ, ಚೆನ್ನಶೆಟ್ಟಿಕೊಪ್ಪ ಹಾಗೂ ಅಡೂರಿನಲ್ಲಿ ಬುಧವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಂಗಾರಪ್ಪ ಅವರ ಹೆಸರಿನ ಅನುಕಂಪವನ್ನು ಸೃಷ್ಟಿಸಿ, ತಾಲೂಕಿನಲ್ಲಿ ಜಾತಿ ರಾಜಕಾರಣ ಮಾಡಿ, ಮತ ಪಡೆಯುವ ಉದ್ದೇಶವನ್ನು ಮೊದಲು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ವಿಷಾದನೀಯ: ಎಸ್. ಬಂಗಾರಪ್ಪ ಅವರಿಗೆ ತಮ್ಮ ಪುತ್ರ ಮಧು ಬಂಗಾರಪ್ಪ ಶಾಸಕನಾಗಬೇಕು ಎಂಬ ಕೊನೆ ಆಸೆ ಇತ್ತು. ಅದು ಈಗಾಗಲೆ ಈಡೇರಿದೆ. ಆದರೆ, ಅವರಿಗೆ ತಮ್ಮ ಹೆಣ್ಣುಮಕ್ಕಳನ್ನು ರಾಜಕೀಯಕ್ಕೆ ತರಬೇಕು ಎಂಬ ಆಸೆ ಖಂಡಿತಾ ಇರಲಿಲ್ಲ. ಈ ಬಗ್ಗೆ ನನ್ನ ಹತ್ತಿರ ಅವರು ಕೆಲವು ಬಾರಿ ಚರ್ಚೆ ಸಹ ನಡೆಸಿದ್ದರು. ಆದರೆ, ಅವರ ಕುಟುಂಬದ ಕೆಲವರು ಎಸ್. ಬಂಗಾರಪ್ಪ ಅವರ ಆಶಯವನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿರುವುದು ವಿಷಾದನೀಯ. ಅವರ ಹೆಸರನ್ನು ಬೀದಿಗೆ ತರುವ ಕೆಲಸ ಮಾಡುತ್ತಿರುವುದು, ಕುಟುಂಬ ರಾಜಕಾರಣ ಮುಂದಿಟ್ಟುಕೊಂಡು ಮತದಾರರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಪ್ರವೃತ್ತಿ ಜೆಡಿಎಸ್ ಬಿಡಬೇಕು ಎಂದರು.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕೇವಲ ಮೂರುವರೆ ವರ್ಷದಲ್ಲಿ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರದ್ದಾಗಿದೆ. ಯಡಿಯೂರಪ್ಪ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಚಿತ್ರಣವನ್ನೆ ಬದಲಾಯಿಸಿ, ಯಾವ ಮುಖ್ಯಮಂತ್ರಿಗಳು ತಮ್ಮ ಜಿಲ್ಲೆಗೆ ಕೊಡಲಾರದಷ್ಟು ಕೊಡುಗೆ ನೀಡಿದ್ದಾರೆ. ಮತದಾರರು ಯಡಿಯೂರಪ್ಪ ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದರು.
ಪ್ರಮುಖರಾದ ಕೆ. ಅರುಣಪ್ರಸಾದ್, ಮಂಜುನಾಥ್, ನವೀನ್ ಹೊಸೂರು, ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಪ್ರೇಮ್ ಸಾಗರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement