ಮೋದಿಗೆ ಬಡವರ ಹಸಿವು ಗೊತ್ತಿಲ್ಲ
ಕ.ಪ್ರ.ವಾರ್ತೆ ತೀರ್ಥಹಳ್ಳಿ ಏ.9
ಕಾಂಗ್ರೆಸ್ ಪಕ್ಷದ ಈ ಹಿಂದಿನ ಯೋಜನೆ ಗರೀಬಿ ಹಠಾವೋ ಕೂಗಿನಲ್ಲೇ ಈಗಿನ ಎಲ್ಲ ಯೋಜನೆಗಳೂ ಅಡಗಿವೆ. ದಿ. ಇಂದಿರಾಗಾಂಧಿ ಅವರು ಆ ಕಾಲದಲ್ಲೇ ಯೋಜನೆಗಳಿಗೆ ಭದ್ರ ಬುನಾದಿ ಹಾಕಿದ್ದಾರೆ. ವಿಶ್ವ ಸಂಸ್ಥೆಯಲ್ಲೂ ನರೇಗಾ ಯೋಜನೆ ಬಗ್ಗೆ ಪ್ರಶಂಸೆ ಬಂದಿದೆ. ಆದರೆ, ನರೇಂದ್ರ ಮೋದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲೂಟಿ ಹೊಡೆಯಲಾಗಿದೆ ಎಂದು ಹೇಳಿರುವ ಮಾತಿನ ಮೂಲ ಉದ್ದೇಶ ಗಮನಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯ್ತಿ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2002ರಲ್ಲೇ ಆರ್‌ಟಿಐ ಕಾಯಿದೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದ್ದು ಕರ್ನಾಟಕ ರಾಜ್ಯ. ಬಿಸಿಯೂಟದ ಯೋಜನೆಯನ್ನೂ ರಾಜ್ಯದಲ್ಲೇ ಪ್ರಥಮವಾಗಿ ಜಾರಿಗೆ ತಂದಿದೆ.
ಈ ಎರಡು ಯೋಜನೆಗಳೂ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಯೋಜನೆಗಳಾಗಿ ಮಾರ್ಪಟ್ಟಿದ್ದು, ನಮ್ಮ ಯೋಜನೆಗಳ ಮಹತ್ವಾಕಾಂಕ್ಷೆಯ ಫಲ ಎಂದು ಹೇಳಿದರು.
ಮೋದಿಗೆ ಹಸಿವು ಗೊತ್ತಿಲ್ಲ: ಉದ್ಯೋಗ ಖಾತ್ರಿ ಯೋಜನೆಯಾಗಲಿ, ಬಡವರಿಗೆ 1 ದರದಲ್ಲಿ 1 ಕೆಜಿ ಅಕ್ಕಿ ವಿತರಿಸುವ ಯೋಜನೆಯಾಗಲಿ ಇದನ್ನು ಕಾಂಗ್ರೆಸ್ ಪಕ್ಷ ಪ್ರಾಮಾಣಿಕವಾಗಿ ಜಾರಿಗೆ ತಂದು ಬಡವರ ಹಸಿದ ಹೊಟ್ಟೆ ತುಂಬಿಸಿದೆ. ಆದರೆ, ಮೋದಿಗೆ ಬಡವರ ಹಸಿವು ಏನೆಂದು ಗೊತ್ತಿಲ್ಲ.
ಒಂದು ಕಾರ್ಯಕ್ರಮ ಆರಂಭ ಮಾಡಿದರೆ ಅದು ರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪುಗೊಂಡರೆ ಅದಕ್ಕಿಂತ ಯಶಸ್ಸು ಬೇರೇನಿದೆ.
ಮೋದಿ ರಾಜ್ಯದಲ್ಲಿ ಆರ್‌ಟಿಐ, ಲೋಕಾಯುಕ್ತ ಇನ್ನೂ ರಚನೆಯಾಗಿಲ್ಲ. ಮೋದಿ ರಾಜ್ಯದಲ್ಲೂ ಒಂದಿಷ್ಟು ಲೂಟಿ ಖಂಡಿತಾ ಆಗಿರುತ್ತದೆ. ಆದರೆ, ಬೆಳಕಿಗೆ ಬಂದಿಲ್ಲ ಎಂದು ಹೇಳಿದರು.
ಬಿಜೆಪಿ ಹೆಸರನ್ನೇ ಹೇಳಲ್ಲ: ಎಲ್.ಕೆ.ಆಡ್ವಾನಿ, ವಾಜಪೇಯಿಯಂಥವರು ಬಿಜೆಪಿಗೆ ಒಂದಿಷ್ಟು ಘನತೆ, ಗೊರವ ತಂದುಕೊಟ್ಟಿದ್ದರು.
ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಹೋಗುತ್ತದೆ. ಹಾಗೇ ಇದೀಗ 'ಸರ್ವಂ ಮೋದಿ ಮಯಂ'. ಬಿಜೆಪಿ ಹೆಸರೇ ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, ದಾಕ್ಷಿಣ್ಯಕ್ಕೆ ಪ್ರತಿಯೊಬ್ಬರೂ ಸಿಕ್ಕಬೇಕು ಎನ್ನುವ ಛಲ ಮೋದಿ ಅವರಿಗಿದೆ. ಹಾಗಾಗಿ, ಆಡ್ವಾನಿ ಅವರಿಗೆ ಗಾಂಧಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಷ್ಟವಿಲ್ಲದಿದ್ದರೂ, ಮೋದಿಯವರ ಒತ್ತಾಯಕ್ಕೆ ಸ್ಪರ್ಧಿಸಬೇಕಾದ ಪರಿಸ್ಥಿತಿ ಬಂತು ಎಂದರು.
ಅಭ್ಯರ್ಥಿ ಮಂಜುನಾಥ ಭಂಡಾರಿ ಮಾತನಾಡಿ ಹಾಗೂ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು. ಮಾಜಿ ಶಾಸಕರಾದ ಜೆ.ಡಿ. ನಾರಾಯಣಪ್ಪ, ಪಟಮಕ್ಕಿ ರತ್ನಾಕರ್, ಕಡಿದಾಳು ದಿವಾಕರ್, ಬಿ.ಸ್ವಾಮಿ ರಾವ್, ಶಿವಮೊಗ್ಗ ಶಾಸಕ ಪ್ರಸನ್ನಕುಮಾರ್, ಕುಮಾರ್ ಬಂಗಾರಪ್ಪ, ಚಂದ್ರಶೇಖರ್, ಕಾಂಗ್ರೆಸ್ ವಕ್ತಾರ ಬಿ.ಎಲ್. ಶಂಕರ್, ಕಡ್ತೂರು ದಿನೇಶ್, ಕಲಗೋಡು ರತ್ನಾಕರ್, ಗರುಡಪ್ಪಗೌಡ. ಪ್ರಭಾವತಿ ಶಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿದರು.