ಬಿಜೆಪಿ ವಿರುದ್ಧ ಮತ ಚಲಾಯಿಸಿ: ಅಶೋಕ್
ಶಿವಮೊಗ್ಗ: ಬಿಜೆಪಿ ವಿರುದ್ಧ ಮತ ಚಲಾಯಿಸಿ ಎಂದು ಕೋಮು ಸೌಹಾರ್ದ ವೇದಿಕೆಯು ಮತದಾರರಿಗೆ ಕರೆ ನೀಡಿದೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಇವರು, ಬಿಜೆಪಿ ಅಭ್ಯರ್ಥಿ ವಿರುದ್ಧ ಯಾರು ಗೆಲ್ಲುತ್ತಾರೆ ಎಂದೆನಿಸುತ್ತದೆಯೋ ಅವರಿಗೆ ಮತ ನೀಡಿ ಎಂದು ಹೇಳಿದ್ದಾರೆ.
ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್, ಬಿಜೆಪಿಗೆ ಮತ ನೀಡದಂತೆ ಎಲ್ಲೆಡೆ ಮತಜಾಗೃತಿ ಸಭೆ ನಡೆಸುತ್ತೇವೆ. ಬಿಜೆಪಿಯವರು ಭಾರತವನ್ನು ಗೆಲ್ಲಿಸುವುದಿಲ್ಲ. ಬದಲಾಗಿ ಭಾರತದ ಬಹುವೈವಿಧ್ಯತೆ, ಸಂಸ್ಕೃತಿ, ಭಾಷಾ ಪರಂಪರೆಯನ್ನು ನಾಶ ಮಾಡುತ್ತಾರೆ ಎಂದು ಟೀಕಿಸಿದರು.
ಗುಜರಾತ್ ರಾಜ್ಯವೇನು ಅತ್ಯಂತ ಮುಂದುವರಿದ ರಾಜ್ಯವಲ್ಲ. ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲೇ 14ನೇ ಸ್ಥಾನದಲ್ಲಿದೆ. ಸುಳ್ಳು ಹೇಳುತ್ತಾ ಪ್ರಚಾರ ಪಡೆಯುತ್ತಿದ್ದಾರೆ. ಗುಜರಾತ್ ಹಾಗೂ ಮೋದಿ ಅವರ ಸುಳ್ಳುಗಳ ಬಗ್ಗೆ ವೇದಿಕೆ ಪುಸ್ತಕ ಪ್ರಕಟಿಸಿದೆ ಎಂದರು.
ರಾಮ ಮಂದಿರ ಕೆಡವಿದ್ದು ನಾವೇ ಎಂದು ಬಹಿರಂಗವಾಗಿ ಹೇಳಿದರೂ ಸಹ ಸರ್ಕಾರ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸುತ್ತಿಲ್ಲ. ಇವರನ್ನು ಕೂಡಲೇ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.