ಸಮಸ್ಯೆ ಬಂದಾಗ ಬಂಗಾರಪ್ಪ ಬಳಿ ಹೋಗಲು ಸಾಧ್ಯವೇ?
ಸಾಗರ: ದಿ.ಬಂಗಾರಪ್ಪ ಅವರ ಹೆಸರಿನಲ್ಲಿ ಮತಯಾಚಿಸುವ ವ್ಯಕ್ತಿಗಳನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳಿಸಿದರೆ ನಾಳೆ ಜಿಲ್ಲೆಯ ಸಮಸ್ಯೆ ಬಂದಾಗ ಬಂಗಾರಪ್ಪ ಅವರ ಬಳಿ ಹೋಗಿ ಕೇಳಲು ಸಾಧ್ಯವೆ ಎಂದು ಸಂಯುಕ್ತ ಜನತಾದಳದ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ಧರ್ಮಪ್ಪ ಲೇವಡಿ ಮಾಡಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜೆಡಿಯು ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಷ್ಟುದಿನ ಬಂಗಾರಪ್ಪನವರ ಗಂಡು ಮಕ್ಕಳಿಬ್ಬರು ಜಿಲ್ಲೆಯ ಜನರನ್ನು ಹಿಸ್ಸೆ ಮಾಡಿಕೊಂಡು, ಇವರು ನಮ್ಮವರು ಎಂದು ಹೇಳುತ್ತಿದ್ದರು. ಈಗ ಕುಟುಂಬದ ಹೆಣ್ಣು ಮಕ್ಕಳು ಸಹ ಸೇರಿಕೊಂಡಿದ್ದು, ಜಿಲ್ಲೆಯ ಜನರನ್ನು ನಾಲ್ಕು ಪಾಲು ಮಾಡಿ ಹಂಚಿಕೊಳ್ಳುವ ಸನ್ನಾಹದಲ್ಲಿದ್ದಾರೆ ಎಂದರು.
ಕುಟುಂಬ ರಾಜಕಾರಣ: ಸಿನಿಮಾ ನಟರನ್ನು ತಂದು ಕುಣಿಸಿ, ತಮ್ಮ ಪರವಾಗಿ ಪ್ರಚಾರ ಮಾಡಿಸಿದರೆ ಗೆಲುವು ಸುಲಭ ಎನ್ನುವ ಮನೋಸ್ಥಿತಿ ಕೆಲವರದ್ದಾಗಿದೆ. ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಬೆಳೆಯಲು ಮತದಾರರು ಅವಕಾಶ ಮಾಡಿಕೊಡಬಾರದು. ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಗನನ್ನು ಮೊದಲ ಅವಧಿಗೆ ಸಂಸದರನ್ನಾಗಿ ಮಾಡಿ, ಈಗ ತಾವೆ ಸಂಸದರಾಗುವ ಮೂಲಕ ಕುಟುಂಬ ರಾಜಕಾರಣ ಪೋಷಿಸುತ್ತಿದ್ದರೆ, ಜೆಡಿಎಸ್ ಬಂಗಾರಪ್ಪ ನಂತರ ಅವರ ಕುಟುಂಬದವರೆ ಜಿಲ್ಲೆಯನ್ನು ತಮ್ಮ ಮುಷ್ಟಿಯಲ್ಲಿ ಇರಿಸಿಕೊಳ್ಳಬೇಕು ಎಂಬ ಪ್ರಯತ್ನ ನಡೆಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದರು.
ದೇಶದಲ್ಲಿ ನರೇಂದ್ರ ಮೋದಿ ಯುದ್ದವನ್ನು ಜಯಸಿದೆ ಅಶ್ವಮೇಧ ಕುದುರೆಯನ್ನು ಮುಂದೆ ಬಿಟ್ಟು ಹಿಂಬಾಲಿಸುತ್ತಿದ್ದಾರೆ. ಭಾರತ ಗೆಲ್ಲಿಸಿ ಎನ್ನುವ ಘೋಷಣೆಯೆ ವಿಚಿತ್ರವಾಗಿದ್ದು, ಯುದ್ದ, ಕ್ರಿಕೆಟ್ ಇನ್ನಿತರೆ ಸಂದರ್ಭದಲ್ಲಿ ಭಾರತ ಗೆಲ್ಲಿಸಿ ಎನ್ನುವುದು ಮಾಮೂಲಿ. ಈಗ ಯಾವ ಕಾರಣಕ್ಕೆ ಭಾರತ ಗೆಲ್ಲಿಸಿ ಎನ್ನುತ್ತಿದ್ದಾರೆ ಎನ್ನುವುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಅವರು ಸವಾಲು ಹಾಕಿದರು.
ಅಚ್ಚರಿಯ ಫಲಿತಾಂಶ: ಜಿಲ್ಲೆಯಲ್ಲಿ ಜೆಡಿಯು ಪರವಾಗಿ ಅಗೋಚರ ಅಲೆ ಇದೆ. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಜಿಲ್ಲೆಯ ಜನರು ಜನತಾ ಪರಿವಾರವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಈ ಚುನಾವಣೆಯಲ್ಲಿ ಅದು ಮತ್ತೊಮ್ಮೆ ಸಾಬೀತಾಗಲಿದೆ. ಜೆಡಿಯು ಜಿಲ್ಲೆಯಲ್ಲಿ ಹೆಚ್ಚು ಅಂತರದಿಂದ ಜಯ ಸಾಧಿಸುವ ಎಲ್ಲ ಸಾಧ್ಯತೆ ಇದ್ದು, ಮತದಾರರು ಅಚ್ಚರಿಯ ಫಲಿತಾಂಶ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಜೆಡಿಯು ರಾಜ್ಯ ಕಾರ್ಯದರ್ಶಿ ಲೋಕಪಾಲ ಜೈನ್, ಜಿಲ್ಲಾಧ್ಯಕ್ಷ ಜಯಪ್ರಕಾಶ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮುದ್ದು, ನಟರಾಜ ಕಾನುಗೋಡು, ತೀರ್ಥಹಳ್ಳಿ ಕ್ಷೇತ್ರದ ವಕ್ತಾರ ಬೇಹಳ್ಳಿ ನಾಗರಾಜ್ ಡಿ. ಇದ್ದರು.